ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಭೋಜೇಗೌಡ ಗೆಲುವು: ಉುಪಿಯಲ್ಲಿ ಜೆಡಿಎಸ್‌ನಿಂದ ವಿಜಯೋತ್ಸವ

ಉಡುಪಿ, ಜೂ. 13: ರಾಜ್ಯ ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಹೊಂದಿದ್ದ ಆಧಿಪತ್ಯ ಅಂತ್ಯಗೊಂಡಿದೆ. ಜೆಡಿಎಸ್ ಇಲ್ಲಿ ಇದೇ ಮೊದಲ ಬಾರಿಗೆ ಗೆಲುವಿನ ಪತಾಕೆ ಹಾರಿಸುವ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿದೆ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು ಹೇಳಿದ್ದಾರೆ.
ನಗರದ ಚಿತ್ತರಂಜನ್ ವೃತ್ತದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಬುಧವಾರ ನಡೆದ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡರ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡುತಿದ್ದರು.
ಕಳೆದೆರಡು ಚುನಾವಣೆಗಳಲ್ಲಿ ಜಯ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಗಣೇಶ್ ಕಾರ್ಣಿಕ್ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಜೆಡಿಎಸ್ ಅಭ್ಯರ್ಥಿ ಭೋಜೆಗೌಡ ರು ಶಿಕ್ಷಕರ ಸಮಸ್ಯೆಗಳ ಕುರಿತಂತೆ ನಿರಂತರ ಹೋರಾಟ ನಡೆಸಿದ್ದಲ್ಲದೆ, ಮುಂದೆಯೂ ಶಿಕ್ಷಕರ ಸಮಸ್ಯೆಗಳಗೆ ನಿರಂತರವಾಗಿ ಸ್ಪಂಧಿಸಲಿದ್ದಾರೆ ಎಂದವರು ಭರವಸೆ ನೀಡಿದರು.
ಮುಂಬರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷವನ್ನು ಕಟ್ಟಲಿದ್ದೇವೆ. ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿರುವುದರಿಂದ ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿ ಕೆಲಸಗಳನ್ನು ಪಕ್ಷ ಕೈಗೊಳ್ಳಲಿದೆ ಎಂದು ಯೋಗೀಶ್ ಶೆಟ್ಟಿ ತಿಳಿಸಿದರು.
ವಿಜಯೋತ್ಸವದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ರಾಜ್ಯ ಸಂಘಟನ ಕಾರ್ಯದರ್ಶಿ ಉದಯ ಹೆಗ್ಡೆ ಕಾಪು, ಉಡುಪಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಜಯಕರ ಪೂಜಾರಿ, ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಶೆಟ್ಟಿ, ವೀಕ್ಷಕ ಸುಧಾಕರ ಶೆಟ್ಟಿ, ಮನ್ಸೂರ್ ಇಬ್ರಾಹಿಂ, ಹುಸೇನ್ ಹೈಕಾಡಿ, ವೆಂಕಟೇಶ್ ಎಂ.ಟಿ., ಅಬ್ದುಲ್ ಖಾದರ್ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.







