ಅಮಾನತ್ ಬ್ಯಾಂಕ್‌ನ ನಿವೃತ್ತ ನೌಕರರಿಗೆ ವೇತನ ಪಾವತಿ ಮಾಡಿ: ಹೈಕೋರ್ಟ್ ಆದೇಶ

ಬೆಂಗಳೂರು, ಜೂ.13: ಅಮಾನತ್ ಬ್ಯಾಂಕಿನಿಂದ ಸ್ವಯಂ ನಿವೃತ್ತಿ ಹೊಂದಿದ 35 ಅರ್ಜಿದಾರ ನೌಕರರಿಗೆ ಇದೇ 15ರೊಳಗೆ ಬಾಕಿ ಉಳಿದಿರುವ ವೇತನದಲ್ಲಿ ಅರ್ಧದಷ್ಟು ಪಾವತಿ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಅಮಾನತ್ ಕೋ- ಆಪರೇಟಿವ್ ಬ್ಯಾಂಕ್ ನೌಕರರ ಸಂಘದ ಸದಸ್ಯರೂ ಆದ 35 ಜನ ಸ್ವಯಂ ನಿವೃತ್ತಿ ಹೊಂದಿದ ನೌಕರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಇದೇ 15ರ ಸಂಜೆ 5 ಗಂಟೆಯೊಳಗೆ ಅರ್ಜಿದಾರ ನೌಕರರಿಗೆ ಅವರ ಸಂಬಳದ ಅರ್ಧದಷ್ಟು ಹಣವನ್ನು ಪಾವತಿ ಮಾಡಬೇಕು. ರಂಜಾನ್ ಹಬ್ಬ ಇರುವುದರಿಂದ ಕೂಡಲೇ ಅವರಿಗೆ ವೇತನ ಪಾವತಿ ಮಾಡಬೇಕು ಎಂದು ನ್ಯಾಯಮೂರ್ತಿಗಳು ಬ್ಯಾಂಕ್‌ಗೆ ಮಧ್ಯಂತರ ನಿರ್ದೇಶನ ನೀಡಿದೆ.
ಪ್ರಕರಣವೇನು: ನಷ್ಟದಲ್ಲಿದೆ ಎಂಬ ಕಾರಣಕ್ಕೆ ಅಮಾನತ್ ಬ್ಯಾಂಕ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2013ರಲ್ಲಿ ವಹಿವಾಟು ನಡೆಸದಂತೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಲಂ 35 (ಎ) ಅಡಿಯಲ್ಲಿ ನಿರ್ಬಂಧಿಸಿತ್ತು. ಬ್ಯಾಂಕ್ ರಾಜ್ಯದಾದ್ಯಂತ ವಿವಿಧೆಡೆ ಒಟ್ಟು 11 ಶಾಖೆಗಳನ್ನು ಹೊಂದಿದ್ದು ಇದರಲ್ಲಿ ಒಟ್ಟು 370 ನೌಕರರು ಉದ್ಯೋಗಿಗಳಾಗಿದ್ದರು. ಇದರ ಮಧ್ಯೆ ಬ್ಯಾಂಕ್ ಖಾತೆದಾರರು ಠೇವಣಿ ವಾಪಸು ಕೋರಿ ಕೋರ್ಟ್ ಮೆಟ್ಟಿಲೇರಿದಾಗ ನ್ಯಾಯ ಪೀಠವು, ಬ್ಯಾಂಕ್ ನಷ್ಟ ಸರಿದೂಗಿಸಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಿತ್ತು.
ಇದರ ಅನುಸಾರ ಬ್ಯಾಂಕ್ ನೌಕರರು ಕೆಲಸ ಮಾಡದೆ ಸಂಬಳ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ 25 ವರ್ಷ ದುಡಿದ ಹಾಗೂ 50 ವರ್ಷ ಮೀರಿದ ಸುಮಾರು 104 ಜನರು ಸ್ವಯಂ ನಿವೃತ್ತಿ ಪಡೆಯುವಂತೆ ಬ್ಯಾಂಕ್ ಆಡಳಿತ ಮಂಡಳಿ ಕ್ರಮ ಕೈಗೊಂಡಿತ್ತು. ಈ 104 ಜನರಲ್ಲಿ 35 ಜನರು ಹೈಕೋರ್ಟ್ ಮೆಟ್ಟಿಲೇರಿ, ನಮಗೆ ಪೂರ್ವಭಾವಿ ನೋಟಿಸ್ ನೀಡದೆ ತೆಗೆದು ಹಾಕಲಾಗಿದೆ ಎಂದು ಆಕ್ಷೇಪಿಸಿದ್ದರು. ಇದೀಗ ನ್ಯಾಯಪೀಠವು, 2017ರ ಜೂನ್ 16ರಿಂದ ತಡೆಹಿಡಿಯಲಾಗಿರುವ ಅರ್ಜಿದಾರ ನೌಕರರ ಸಂಬಳದ ಅರ್ಧದಷ್ಟು ಮೊತ್ತವನ್ನು ಇದೇ 15ರೊಳಗೆ ನೀಡಿ ಎಂದು ಆದೇಶಿಸಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ.







