ಹೌದಿ ಭದ್ರಕೋಟೆಯ ಮೇಲೆ ಸೌದಿ ನೇತೃತ್ವದ ಮಿತ್ರಕೂಟ ದಾಳಿ

ಏಡನ್, ಜೂ. 13: ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಬೆಂಬಲಿತ ಪಡೆಗಳು ಬುಧವಾರ ಯಮನ್‌ನ ಪ್ರಮುಖ ಬಂದರು ನಗರ ಹೊಡೈಡಾ ಮೇಲೆ ದಾಳಿ ನಡೆಸಿವೆ. ಇದು ಅರಬ್ ದೇಶಗಳ ಒಕ್ಕೂಟ ಮತ್ತು ಇರಾನ್ ಬೆಂಬಲಿತ ಹೌದಿ ಬಂಡುಕೋರರ ನಡುವೆ ಮೂರು ವರ್ಷಗಳಿಂದ ನಡೆಯುತ್ತಿರುವ ಕಾಳಗದಲ್ಲೇ ಭೀಕರ ಹೋರಾಟ ಎಂದು ಹೇಳಲಾಗಿದೆ.
ಕಪ್ಪು ಸಮುದ್ರದ ಬಂದರಿನ ದಕ್ಷಿಣದಲ್ಲಿ ಜಮಾಯಿಸಿರುವ ಯಮನಿ ಪಡೆಗಳ ಭೂಕಾರ್ಯಾಚರಣೆಗೆ ನೆರವಾಗುವುದಕ್ಕಾಗಿ ಮಿತ್ರಕೂಟದ ಯುದ್ಧ ವಿಮಾನಗಳು ಮತ್ತು ಯುದ್ಧ ನೌಕೆಗಳು ಹೌದಿ ನೆಲೆಗಳ ಮೇಲೆ ದಾಳಿ ನಡೆಸುತ್ತಿವೆ.
ಈ ವಿಷಯವನ್ನು ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ಯಮನ್ ಸರಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಹೌದಿ ಬಂಡುಕೋರರು ಯಮನ್ ರಾಜಧಾನಿ ಸನಾವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಹಾಗೂ ಹೊಡೈಡಾ ಬಂದರು ಕೂಡ ಅವರ ವಶದಲ್ಲಿದೆ.
ಈ ಬಂದರನ್ನು ತೆರವುಗೊಳಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ ನೀಡಿರುವ ಗಡುವು ಮುಗಿದ ಬಳಿಕ ‘ಗೋಲ್ಡನ್ ವಿಕ್ಟರಿ’ ಕಾರ್ಯಾಚರಣೆಯನ್ನು ಆರಂಭಗೊಂಡಿದೆ.
ಹೊಡೈಡಾ ಬಂದರು ಅಪಾರ ಸಂಖ್ಯೆಯ ಯಮನ್ ನಾಗರಿಕರ ಸಂಪರ್ಕ ಕೇಂದ್ರವಾಗಿದೆ.
ಆಯಕಟ್ಟಿನ ಕೆಂಪು ಸಮುದ್ರ ನೌಕಾ ಮಾರ್ಗದಲ್ಲಿ ಹಾದು ಹೋಗುವ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಹೌದಿ ನಾಯಕ ಮುಹಮ್ಮದ್ ಅಲಿ ಅಲ್-ಹೌದಿ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ಬಂದರಿನ ಮೇಲೆ ದಾಳಿ ನಡೆಸದಂತೆಯೂ ಅವರು ಪಾಶ್ಚಿಮಾತ್ಯ ಬೆಂಬಲಿತ ಮಿತ್ರಕೂಟಕ್ಕೆ ಎಚ್ಚರಿಕೆ ನೀಡಿದ್ದರು.
ಅದೇ ವೇಳೆ, ತನ್ನ ಪಡೆಗಳು ಮಿತ್ರಕೂಟದ ಬಾರ್ಜ್ ಒಂದರ ಮೇಲೆ ದಾಳಿ ನಡೆಸಿವೆ ಎಂಬುದಾಗಿ ಅಲ್-ಹೌದಿ ಹೇಳಿಕೊಂಡಿದ್ದಾರೆ.
ಬಂದರು ತೆರವಿಗೆ ವಿಶ್ವಸಂಸ್ಥೆಗೆ ಗಡುವು
ಯಮನ್‌ನ ಪ್ರಮುಖ ಬಂದರು ಹೊಡೈಡಾವನ್ನು ತೆರವುಗೊಳಿಸಲು ಇರಾನ್ ಬೆಂಬಲಿತ ಹೌದಿ ಬಂಡುಕೋರರಿಗೆ ಮನವರಿಕೆ ಮಾಡಿಕೊಡುವಂತೆ ವಿಶ್ವಸಂಸ್ಥೆ ನೀಡಿರುವ ಗಡುವು ಮಂಗಳವಾರ ರಾತ್ರಿ ಮುಕ್ತಾಯವಾಗಿದೆ ಎಂದು ಯುಎಇ ಹೇಳಿದೆ.
‘‘ಹೊಡೈಡಾ ಬಂದರು ಮತ್ತು ನಗರವನ್ನು ತೆರವುಗೊಳಿಸುವಂತೆ ಹೌದಿಗಳಿಗೆ ಮನವರಿಕೆ ಮಾಡಿಕೊಡಲು ನಾವು ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಮಾರ್ಟಿನ್ ಗ್ರಿಫಿತ್ಸ್‌ಗೆ 48 ಗಂಟೆಗಳ ಕಾಲಾವಕಾಶ ನೀಡಿದ್ದೆವು’’ ಎಂದು ಯುಎಇ ವಿದೇಶ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಡಾ. ಅನ್ವರ್ ಗಾರ್ಗಶ್ ಫ್ರಾನ್ಸ್‌ನ ‘ಲೆ ಫಿಗರೊ’ ಪತ್ರಿಕೆಗೆ ತಿಳಿಸಿದ್ದಾರೆ.
‘‘ನಾವು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಈ 48 ಗಂಟೆಗಳ ಅವಧಿ ಮಂಗಳವಾರ ರಾತ್ರಿ ಮುಕ್ತಾಯಗೊಂಡಿದೆ’’ ಎಂದರು.
ಹೊಡೈಡಾ ಬಂದರನ್ನು ತೆರವುಗೊಳಿಸುವಂತೆ ಹೌದಿಗಳ ಮೇಲೆ ಒತ್ತಡ ಹೇರುವಂತೆ ಡಾ. ಅನ್ವರ್ ಗಾರ್ಗಶ್ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.







