ಜಯನಗರ ಫಲಿತಾಂಶವೇ ವಿಪಕ್ಷದ ಟೀಕೆಗೆ ಉತ್ತರ: ಮುಖ್ಯಮಂತ್ರಿ ಕುಮಾರಸ್ವಾಮಿ

ನಾಗಮಂಗಲ, ಜೂ.13: ರೈತರ ಸಾಲಮನ್ನಾ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯಿಲ್ಲವೆಂದು ಪುನರುಚ್ಚರಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯದ ಜನತೆ ಸಮ್ಮಿಶ್ರ ಸರಕಾರ ಒಪ್ಪಿದ್ದಾರೆ ಎಂಬುದಕ್ಕೆ ಜಯನಗರ ವಿಧಾನಸಭಾ ಚುನಾವಣೆಯ ಫಲಿತಾಂಶವೇ ವಿರೋಧ ಪಕ್ಷದವರಿಗೆ ಉತ್ತರವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ತಾಲೂಕಿನ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ವಿಶೇಷ ಅಮಾವಾಸ್ಯೆ ಪೂಜೆಗಾಗಿ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯನಗರ ಚುನಾವಣಾ ಫಲಿತಾಂಶ ನಿರೀಕ್ಷಿತವಾಗಿತ್ತು. ಕಾಂಗ್ರೇಸ್ ಅಭ್ಯರ್ಥಿ ಜನತೆಯ ಜೊತೆಗಿನ ಉತ್ತಮ ಒಡನಾಟ ಗೆಲುವಿಗೆ ಕಾರಣವಾಗಿದೆ. ಮೈತ್ರಿ ಸರಕಾರವನ್ನು ಜನತೆ ಒಪ್ಪಿದ್ದಾರೆ. ಹಾಗಾಗಿಯೇ ಜಯನಗರ ಫಲಿತಾಂಶವನ್ನು ವಿರೋಧ ಪಕ್ಷದವರಿಗೆ ಉತ್ತರವಾಗಿ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಸಾಲಮನ್ನಾ ಖಚಿತ: ರೈತರ ಸಾಲಮನ್ನಾ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ, ಈಗಾಗಲೇ ಬ್ಯಾಂಕ್ ಅಧಿಕಾರಿಗಳೊಂದಿಗೆ ಇದರ ಸಾಧಕಬಾಧಕಗಳ ಕುರಿತು ಚರ್ಚಿಸಿದ್ದೇನೆ. ಯಾವ ಪ್ರಮಾಣದ ಸಾಲಮನ್ನಾ ಎಂಬುದನ್ನು ಬಜೆಟ್‍ನಲ್ಲಿ ತಿಳಿಸಲಾಗುವುದು. ಕೊಟ್ಟ ಮಾತಿನಿಂತೆ ನಡೆದುಕೊಳ್ಳುತ್ತೇನೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಅವರು ಮನವಿ ಮಾಡಿದರು.
ಅಧಿಕಾರ ಉಳಿಸಿಕೊಳ್ಳಲು ದೇವರ ಮೊರೆಹೋಗಿಲ್ಲ:
ನಾನು ಸಿಎಂ ಆಗಲು ಆದಿಚುಂಚನಗಿರಿ ಕಾಲಭೈರವನ ಅನುಗ್ರಹದ ಪ್ರಭಾವವೂ ಕಾರಣವಾಗಿದೆ, ಆದರೆ, ಅಧಿಕಾರ ಶಾಶ್ವತವಲ್ಲ ಅನ್ನೋದು ನನಗೂ ಗೊತ್ತಿದೆ. ಹಾಗಾಗಿ ವೈಯುಕ್ತಿಕವಾಗಿ ಅಧಿಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿಲ್ಲ. ರಾಜ್ಯದ ಅಭಿವೃದ್ದಿಗಾಗಿ, ಜನತೆಯ ನೆಮ್ಮದಿಗಾಗಿ ಮತ್ತು ಉತ್ತಮ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಭತ್ತದ ನಾಟಿಯಲ್ಲಿ ಭಾಗಿಯಾಗುವೆ: ದೇವರ ಅನುಗ್ರಹದಿಂದ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಸಂಕಷ್ಟದಲ್ಲಿದ್ದ ಮಂಡ್ಯ ಜಿಲ್ಲೆಯ ರೈತರು ಈ ಬಾರಿ ಭತ್ತದ ನಾಟಿ ಮಾಡುವ ಕಾಲ ಬಂದಿದೆ. ನಾನೇ ಮಂಡ್ಯದ ರೈತರೊಂದಿಗೆ ಭತ್ತದ ನಾಟಿ ಮಾಡುವ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುತ್ತೇನೆ ಎಂದು ಅವರು ಹೇಳಿದರು.
ಪುಟ್ಟರಾಜುಗೆ ಜಿಲ್ಲಾ ಉಸ್ತುವಾರಿ ಸುಳಿವು:
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮಂಡ್ಯ ಜಲ್ಲೆಯ ಮೈಷುಗರ್ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಮಂತ್ರಿಯಾಗಿರುವ ಪುಟ್ಟರಾಜು ನೋಡಿಕೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ಪುಟ್ಟರಾಜುಗೆ ಜಿಲ್ಲಾ ಉಸ್ತುವಾರಿಯನ್ನು ನೀಡುವ ಸುಳಿವು ನೀಡಿದರು.
ಪೂಜಾಕೈಂಕರ್ಯ ನೆರವೇರಿಸಿದ ಚುಂಚಶ್ರೀ
ಮಠದ ಸಂಪ್ರದಾಯದಂತೆ ಚುಂಚನಗರಿ ಮಠದ ಪೀಠಾದ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿ ಸಿ.ಎಂ. ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡು ಮಠದ ನಾಗಲಿಂಗೇಶ್ವರನ ಸನ್ನಿಧಿಯಲ್ಲಿ ಎಚ್‍ಡಿಕೆ ದಂಪತಿಗೆ ಹೋಮ ಹವನ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಕುಮಾರಸ್ವಾಮಿಯೊಂದಿಗೆ ಪತ್ನಿ ಅನಿತಾಕುಮಾರಸ್ವಾಮಿ, ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಸುರೇಶ್‍ಗೌಡ, ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ, ಇತರರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಎಸ್ಪಿ ಜಿ.ರಾಧಿಕಾ ಹಾಜರಿದ್ದರು.
'ಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸಲು ಶಾಸಕ ಕೆ.ಸುರೇಶ್‍ಗೌಡರು ಕೂಡ ಸಮರ್ಥವಾಗಿದ್ದಾರೆ. ಹೀಗಿರುವಾಗ ಜಿಲ್ಲೆಯಲ್ಲಿ 7 ವಿಧಾನಸಭಾ ಶಾಸಕರು ಮತ್ತು 3 ವಿಧಾನಪರಿಷತ್ ಸೇರಿ 10 ಜನ ಶಾಸಕರಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಸಮರ್ಥರೇ ಆಗಿದ್ದು, ಜಿಲ್ಲೆಯ ಉಸ್ತುವಾರಿಗಾಗಿ ನಾನು ಮುನಿಸಿಕೊಂಡಿಯೂ ಇಲ್ಲ. ಡಿ.ಸಿ.ತಮ್ಮಣ್ಣ ಕೂಡ ಸಮರ್ಥರಿದ್ದು, ನಮ್ಮಿಬ್ಬರಲ್ಲಿ ಯಾರಿಗೆ ಜಿಲ್ಲಾ ಉಸ್ತುವಾರಿಕೊಟ್ಟರೂ ಒಗ್ಗಟ್ಟಿನಿಂದ ನಿಭಾಯಿಸುತ್ತೇವೆ”.
-ಸಿ.ಎಸ್.ಪುಟ್ಟರಾಜು, ಸಣ್ಣ ನೀರಾವರಿ ಸಚಿವ.







