ಮಡಿಕೇರಿ: ಭಾರೀ ಗಾಳಿ ಮಳೆಗೆ ಅಂತರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ; ವಾಹನ ಸಂಚಾರ ಸ್ಥಗಿತ

ಮಡಿಕೇರಿ, ಜೂ.13 : ಭಾರೀ ಮಳೆಯಿಂದಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಡಗಿನ ಗಡಿಭಾಗ ಮಾಕುಟ್ಟ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಂಗಳವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಈ ಘಟನೆ ಸಂಭವಿಸಿದ್ದು, ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಎತ್ತರದ ಪ್ರದೇಶಗಳ 50ಕ್ಕೂ ಹೆಚ್ಚು ಮರಗಳು ರಸ್ತೆಗೆ ಉರುಳಿವೆ. ವಿರಾಜಪೇಟೆಯ ಪೆರುಂಬಾಡಿ ಚೆಕ್‍ಪೋಸ್ಟ್‍ನಿಂದ ಮಾಕುಟ್ಟ ಗಡಿಯವರೆಗೆ ಬೃಹತ್ ಗಾತ್ರದ ಸುಮಾರು 20 ಮರಗಳು ಧರೆಗುರುಳಿವೆ.
ಸ್ಥಳೀಯ ಹನುಮಾನ್ ದೇವಾಲಯದ ಸಮೀಪ 20ಕ್ಕೂ ಹೆಚ್ಚು ಪ್ರಯಾಣಿಕ ವಾಹನಗಳು ಅರಣ್ಯ ಭಾಗದ ರಸ್ತೆಯಲ್ಲಿ ಸಿಲುಕಿಕೊಂಡಿದ್ದವು. ಬೆಟ್ಟದಿಂದ ರಭಸವಾಗಿ ನೀರು ಹರಿದು ಬರುತ್ತಿದ್ದು, 2 ಗುಡಿಸಲುಗಳು ನೀರು ಪಾಲಾಗಿವೆ ಮತ್ತು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಮಾಕುಟ್ಟ ಪೋಲೀಸ್ ಔಟ್‍ಪೋಸ್ಟ್‍ನ ಮೆಟ್ಟಲಿನವರೆಗೂ ನೀರು ತುಂಬಿಕೊಂಡಿದೆ.
ರಾತ್ರಿಯಿಂದಲೇ ಲೋಕೋಪಯೋಗಿ ಇಲಾಖೆ, ಕಂದಾಯ, ಅರಣ್ಯ ಮತ್ತು ಪೋಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೂಕುಸಿತದಿಂದ ಉರುಳಿದ ಮರಗಳನ್ನು ತೆರವುಗೊಳಿಸಲು ಹಾಗೂ ರಸ್ತೆ ಸಂಚಾರವನ್ನು ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಮಣ್ಣು ಹಾಗೂ ಮರಗಳ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ರಸ್ತೆಯನ್ನು ಸಂಚಾರ ಯೋಗ್ಯವಾಗಿಸುವುದಾಗಿ ಅವರು ಹೇಳಿದರು. ಆದರೆ ರಸ್ತೆಯ ಕೆಲವು ಭಾಗಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.
ಕಾಲ್ನಡಿಗೆಯಲ್ಲೇ ಸಾಗಿದ ಪ್ರಯಾಣಿಕರು
ಅಂತರಾಜ್ಯ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತದಿಂದಾಗಿ ಕೋಲ್ಕತ್ತ, ಹೈದರಾಬಾದ್, ಮುಂಬೈ, ಬೆಳಗಾಂ ಕಡೆಗಳಿಂದ ಕೇರಳದ ಕಡೆಗೆ ಸಾಗುತ್ತಿದ್ದ ನೂರಾರು ಸರಕು ವಾಹನಗಳು ಹೆದ್ದಾರಿಯಲ್ಲೇ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಯಿತು. ಕೇರಳದ ಕಡೆಯಿಂದ ಬೆಂಗಳೂರು-ಮೈಸೂರು-ಮಂಡ್ಯ ಕಡೆಗೆ ಸಾಗುತ್ತಿದ್ದ ಪ್ರಯಾಣಿಕರು ತಮ್ಮ ವಾಹನಗಳನ್ನು ಸ್ಥಳದಲ್ಲೇ ನಿಲ್ಲಿಸಿ 16 ಕಿ.ಮೀ ದೂರದ ವಿರಾಜಪೇಟೆ ನಗರಕ್ಕೆ ಕಾಲ್ನಡಿಗೆಯಲ್ಲಿ ಬಂದು ಬಸ್‍ಗಳನ್ನು ಆಶ್ರಯಿಸುವ ಪರಿಸ್ಥಿತಿ ಎದುರಾಯಿತು.
ಕಣ್ಣನೂರು-ತಲಚೇರಿಗಳಿಂದ ವಿರಾಜಪೇಟೆ ಮಾರ್ಗವಾಗಿ ಮೈಸೂರು-ಬೆಂಗಳೂರಿಗೆ ಸಾಗುವ ವಾಹನಗಳಿಗೆ ಇರಿಟ್ಟಿ-ಮಾನಂದವಾಡಿ-ಕುಟ್ಟ-ಗೋಣಿಕೊಪ್ಪಕ್ಕಾಗಿ ಸಾಗಲು ಅನುಕೂಲ ಮಾಡಿಕೊಡಲಾಗಿದೆ.







