ಮಡಿಕೇರಿ: ಗುಡ್ಡ ಕುಸಿದು ಲಾರಿ ಕ್ಲೀನರ್ ಮೃತ್ಯು

ಮಡಿಕೇರಿ, ಜೂ.13: ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಲಾರಿ ಕ್ಲೀನರ್ ಒಬ್ಬರು ಸಾವಿಗೀಡಾಗಿರುವ ಘಟನೆ ವೀರಾಜಪೇಟೆ ಸಮೀಪದ ಮಾಕುಟ್ಟದಲ್ಲಿ ನಡೆದಿದೆ.
ಮೃತನನ್ನು ಕೂಟುಹೊಳೆ ನಿವಾಸಿ ಶರತ್(24) ಎಂದು ಗುರುತಿಸಲಾಗಿದೆ.
ಕರ್ನಾಟಕ ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಡಗಿನ ಗಡಿಭಾಗ ಮಾಕುಟ್ಟ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಸಂದರ್ಭ ಕೆಎಲ್58 ಎಕ್ಸ್ 9568ರ ಲಾರಿ ದಾರಿ ಮಧ್ಯೆ ಸಿಲುಕಿದ್ದು, ಅದರ ಮೇಲೆ ಮರದ ರೆಂಬೆಯೊಂದು ಬಿದ್ದಿತ್ತೆನ್ನಲಾಗಿದೆ. ರೆಂಬೆಯನ್ನು ತೆರವುಗೊಳಿಸಲೆಂದು ಕೆಳಗಿಳಿದ ಲಾರಿ ಕ್ಲೀನರ್ ಶರತ್ ರೆಂಬೆಯನ್ನು ತೆರವುಗೊಳಿಸುತ್ತಿದ್ದಾಗ ಆತ ನಿಂತಿದ್ದ ಜಾಗ ಮಣ್ಣು ಕುಸಿದು ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.
ರಾತ್ರಿಯೇ ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರಾದರೂ ಶರತ್ ಪತ್ತೆಯಾಗಿಲ್ಲ.
ಬುಧವಾರ ಮತ್ತೆ ಶೋಧ ನಡೆಸಿದಾಗಿ ಆತನ ಶವ ಸುಮಾರು ಅರ್ಧ ಕಿ.ಮೀ.ದೂರದಲ್ಲಿ ಪತ್ತೆಯಾಗಿದ್ದು, ಅದನ್ನು ಮೇಲೆತ್ತಿ ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.
ಮರಗಳ ತೆರವು ಕಾರ್ಯಾಚರಣೆ: ಮಾಕುಟ್ಟ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ ರಸ್ತೆ ಉರುಳಿರುವ ಮರಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಬುಧವಾರ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ, ಶಾಸಕ ಕೆ.ಜಿ.ಬೋಪಯ್ಯ, ಉಪವಿಭಾಗಾಧಿಕಾರಿ ಕೋನರೆಡ್ಡಿ ತಹಶೀಲ್ದಾರ್ ಗೋವಿಂದರಾಜು, ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗಳಾದ ವಿನಯ ಕುಮಾರ್, ಸುರೇಶ್, ಅರಣ್ಯ ಇಲಾಖೆ ಡಿಎಫ್‍ಒ ಮರಿಯಾ ಕ್ರಿಸ್ತರಾಜ್, ಅಧಿಕಾರಿಗಳಾದ ದಯಾನಂದ, ಗೋಪಾಲ್, ಅಗ್ನಿಶಾಮಕ ದಳದ ಚಂದನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಮರ ಹಾಗೂ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.







