ಸಮುದಾಯ ಯಾರ ಒಬ್ಬರ ಕಿಸೆಯಲ್ಲಿ ಇಲ್ಲ: ತನ್ವೀರ್ ಸೇಠ್ ಟೀಕೆಗೆ ಖಾದರ್ ಪ್ರತಿಕ್ರಿಯೆ

ಉಡುಪಿ, ಜೂ.14: ಸಮುದಾಯ ಯಾರ ಒಬ್ಬರ ಕಿಸೆಯಲ್ಲಿಯೂ ಇಲ್ಲ. ಅದರ ಬಗ್ಗೆ ಕರ್ನಾಟಕದ ಜನತೆ ತಿರ್ಮಾನಿಸುತ್ತಾರೆ. ನಾನು ಯಾರ ಸಚಿವ ಸ್ಥಾನವನ್ನು ಕೂಡ ತಪ್ಪಿಸಲು ಹೋಗಿಲ್ಲ. ಅದು ಆಗುವುದು ಕೂಡ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಎಲ್ಲವೂ ಆಗಿದೆ ಎಂದು ರಾಜ್ಯ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಖಾದರ್‌ಗೆ ಸಮುದಾಯವನ್ನು ಪ್ರತಿನಿಧಿಸುವ ಅರ್ಹತೆ ಇಲ್ಲ ಎಂಬ ಮಾಜಿ ಸಚಿವ ತನ್ವೀರ್ ಸೇಠ್ ಟೀಕೆಯ ಕುರಿತು ಇಂದು ಉಡುಪಿಯ ಉದ್ಯಾವರದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ತನ್ವೀರ್ ಸೇಠ್ ನೀಡಿದ ಹೇಳಿಕೆಯನ್ನು ನಾನು ಕೇಳಿಲ್ಲ. ಈ ವಿಚಾರ ಮಾಧ್ಯಮದವರ ಮೂಲಕ ಗೊತ್ತಾಗಿದೆ. ರಾಜಕೀಯ ಜೀವನದಲ್ಲಿ ನಾನು ನಾಯಕ ಎಂದು ಎಲ್ಲೂ ಹೇಳಿಕೊಂಡಿಲ್ಲ. ಶಾಸಕನಾಗಿ, ಮಂತ್ರಿಯಾಗಿ ಈ ರಾಜ್ಯದ ಆರೂವರೆ ಕೋಟಿ ಜನತೆಯ ಸೇವಕನಾಗಿ ಕೆಲಸ ಮಾಡಿದ್ದೇನೆ. ಈ ಹಿಂದೆ ನೀಡಿದ ಆರೋಗ್ಯ ಮತ್ತು ಆಹಾರ ಇಲಾಖೆಯನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿರ್ವಹಿಸಿದ್ದೇನೆ ಎಂದರು.
ಪಕ್ಷದ ಹೈಕಮಾಂಡ್ ಪ್ರತಿಯೊಬ್ಬರ ಬಗ್ಗೆ ವಿವರಗಳನ್ನು ಪಡೆದುಕೊಂಡಿದೆ. ಪಕ್ಷ ಮತ್ತು ಜನರು ಇಟ್ಟ ವಿಶ್ವಾಸಕ್ಕೆ ಯಾವುದೇ ಚ್ಯುತಿ ಹಾಗೂ ಭ್ರಷ್ಟಾಚಾರ ಆರೋಪ ಬಾರದ ರೀತಿಯಲ್ಲಿ ನನ್ನ ಕೆಲಸ ನಿರ್ವಹಿಸುತ್ತೇನೆ. ನಾವೆಲ್ಲ ಆತ್ಮೀಯರಾಗಿ ಸಹೋದರಂತೆ ಇದ್ದೇವೆ. ತನ್ವೀರ್ ಸೇಠ್ ಅವರ ಕನಸು ಹಾಗೂ ಆಸೆ ಈಡೇರಲಿ ಎಂದು ಈ ಪವಿತ್ರ ತಿಂಗಳಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಸಚಿವ ಖಾದರ್ ತಿಳಿಸಿದರು.







