ಸಾಮಾಜಿಕ ಜಾಲತಾಣಗಳ ಅವಹೇಳನಕಾರಿ ಟೀಕೆಯ ಕಡಿವಾಣಕ್ಕೆ ಆಗ್ರಹ
ಬೆಂಗಳೂರು, ಜೂ.14: ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನಕಾರಿಯಾಗಿ ಟೀಕಿಸುವುದು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಸಮಾಜದ ಸ್ವಾಸ್ಥ ಹಾಳಾಗುತ್ತಿದೆ. ಕಾನೂನು ಇಲಾಖೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಜೆಡಿಎಸ್ ವಕ್ತಾರ ರಾಜುಗೌಡ ಆಗ್ರಹಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅತ್ಯಂತ ಕೆಟ್ಟ ಪದಗಳನ್ನು ಬಳಕೆ ಮಾಡಿ ಟೀಕಿಸುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮಕ್ಕಳ ಕಳ್ಳ ಪೋಸ್ಟ್‌ನಿಂದ ಜೀವ ಹಾನಿ ಮಟ್ಟಕ್ಕೆ ಹೋಗಿತ್ತು ಎಂದು ಹೇಳಿದರು.
ಶಿವಕುಮಾರ್ ಹಾಗೂ ನಟ ದರ್ಶನ್ ತೂಗದೀಪ್ ಹೆಸರಿನ ಫೇಸ್‌ಬುಕ್ ಖಾತೆಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆಯೂ ಅವಹೇಳನಕಾರಿಯಾಗಿ ಟೀಕಿಸಿದ್ದಾರೆ. ಈ ಬಗ್ಗೆ ಪ್ರಜ್ವಲ್ ರೇವಣ್ಣ ಬ್ರಿಗೇಡ್ ಕರ್ನಾಟಕ, ಅಖಿಲ ಕರ್ನಾಟಕ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸೇವಾ ಸಂಘ, ಜೆಡಿಎಸ್ ಯುವ ಘಟಕದ ವತಿಯಿಂದ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದರು. ಈ ರೀತಿ ಪೋಸ್ಟ್‌ಗಳಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಹೆಚ್ಚು ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.







