ರಾಜ್ಯದಲ್ಲಿ ಮಳೆ ಹಾನಿಗೆ 104 ಜೀವ ಹಾನಿ: 22 ಕೊಟಿ ರೂ. ಪರಿಹಾರ ಬಿಡುಗಡೆ - ಆರ್.ವಿ.ದೇಶಪಾಂಡೆ

ಮಂಗಳೂರು, ಜೂ.14: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಬಾರಿ ವಾಡಿಕೆಯ ಮಳೆಗಿಂತ ಹೆಚ್ಚುವರಿ ಮಳೆಯಾಗಿದೆ. ಸಾಕಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ 104 ಜೀವ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ 22 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಾನಿ ಗೀಡಾದ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಪಾಕೃತಿಕ ವಿಕೋಪ ಪರಿಹಾರ ನಿಧಿಯ ಮೂಲಕ ಮಳೆಹಾನಿಯಲ್ಲಿ ಮೃತರ ಕುಟುಂಬಕ್ಕೆ ತಲಾ 4ಲಕ್ಷ ರೂ ಪರಿಹಾರ ನೀಡಲು ಅವಕಾಶವಿದೆ ರಾಜ್ಯದಲ್ಲಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ವಿಶೇಷವಾಗಿ 1ಲಕ್ಷ ರೂ ಪರಿಹಾರವನ್ನು ಸೇರಿಸಿ ಒಟ್ಟು ತಲಾ 5ಲಕ್ಷ ರೂ ಪರಿಹಾರವನ್ನು ಮಳೆಯಲ್ಲಿ ಮೃತ ಪಟ್ಟ ಕುಟುಂಬಗಳಿಗೆ ಬಿಡುಗಡೆ ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲಾಧಿಕಾರಿಗೂ ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ತಲಾ 5 ಕೋಟಿ ರೂ ಬಿಡುಗಡೆ ಮಾಡಲು ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ದ.ಕ ಹಾಗೂ ಉಡುಪಿ ಜಿಲ್ಲೆಗೆ ತಲಾ 3 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಭಾಗಶಃ ಹಾನಿ ಗೀಡಾದ ಮನೆಗಳಿಗೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಚಿಂತನೆ:-ಭಾಗಶಃ ಮಳೆಹಾನಿಗೀಡಾದ ಮನೆಗಳಿಗೆ ಸದ್ಯ ನೀಡುತ್ತಿರುವ ಪರಿಹಾರ 5ಸಾವಿರ ರೂಗಳ ವರೆಗೆ ಪರಿಹಾರ ನೀಡಲಾಗುತ್ತಿದೆ.ಆದರೆ ಈ ಪರಿಹಾರದ ಮೊತ್ತ ದಿಂದ ಸಂತ್ರಸ್ತರಿಗೆ ಹೆಚ್ಚಿನ ಸಹಾಯ ವಾಗುವುದಿಲ್ಲ ಅವರಿಗೆ ಪರಿ ಹಾ ರ ದ ಮೊತ್ತ ಹೆಚ್ಚಿಸಬೇಕು ಎನ್ನುವ ಸಾರ್ವಜನಿಕರ ಅಭಿಪ್ರಾಯವಿದೆ ಈ ಬಗ್ಗೆ ಸರಕಾರದ ಹಂತದಲ್ಲಿ ಚಿಂತನೆ ನಡೆಸಲಾಗುವುದು ಎಂದು ದೇಶಪಾಂಡೆ ತಿಳಿಸಿದರು.
ತುರ್ತು ಕಾರ್ಯಚರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ:-
ಜಿಲ್ಲೆಯಲ್ಲಿ ಮಳೆಹಾನಿ ಹಾಗೂ ತುರ್ತು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಅನಿವಾರ್ಯ ಕಾರಣಗಳಿಗೆ ಹೊರತು ಪಡಿಸಿ ಇತರ ಕಾರಣಗಳಿಗೆ ರಜೆ ಪಡೆದುಕೊಳ್ಳದೆ ಕಾರ್ಯನಿರ್ವಹಿಸಬೇಕು.ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಜನರಿಗೆ ಪರಿಹಾರ ಕಾರ್ಯದಲ್ಲಿ ನೆರವಾಗಲು ಜಿಲ್ಲೆಯಾದ್ಯಂತ ಸಂಚರಿಸಬೇಕು. ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಪ್ರತಿವಾರ ಅಧಿಕಾರಿಗಳ ಸಭೆ, ವಿಡಿಯೋ ಕಾನ್ಫರೆನ್ಸ ನಡೆಸಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ದ.ಕ ಜಿಲ್ಲೆಯಲ್ಲಿ 7 ಜೀವ ಹಾನಿ:-
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ 7 ಜೀವಹಾನಿಯಾಗಿದೆ.12 ಜಾನುವಾರುಗಳು ಮೃತಪಟ್ಟಿದ್ದು ,167 ಎಕ್ರೆ ವಿಸ್ತೀರ್ಣದ ತೋಟಗಾರಿಕಾ ಬೆಳೆಗೆ ಹಾನಿಯಾಗಿದೆ.ಜಿಲ್ಲೆಯಲ್ಲಿ ಸುಮಾರು 748 ಮನೆಗಳಿಗೆ ಹಾನಿಯಾಗಿದೆ 156.3 ಕಿಮೀ ರಸ್ತೆ,9 ಸೇತುವೆಗಳಿಗೆ ಹಾನಿ ಗೀಡಾಗಿದೆ. 262 ಮೆಸ್ಕಾಂನ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಮೂರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ತೊಂದರೆಯಲ್ಲಿರುವ ಅವರ ವೈದ್ಯಕೀಯ ಖರ್ಚನ್ನು ಇಲಾಖೆಯಿಂದ ಭರಿಸಲು ಸೂಚನೆ ನೀಡಿರುವುದಾಗಿ ಸಚಿವ ದೇಶಪಾಂಡೆ ತಿಳಿಸಿದರು.
ಚಾರ್ಮಾಡಿ ಘಾಟ್ ಶೀಘ್ರ ತೆರವಿಗೆ ಕ್ರಮ:- ಚಾರ್ಮಾಡಿ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿದು ಹೋಗಿದ್ದು ಸಂಚಾರ ಸ್ಥಗಿತಗೊಂಡಿದೆ. ಮಣ್ಣನ್ನು ತೆಗೆಯುವ ಹಾಗೂ ಸಂಚಾರಕ್ಕೆ ಆಗಿರುವ ಅಡಚಣೆ ತೆರವುಗೊಳಿಸುವ ಕೆಲಸ ಆಗುತ್ತದೆ ಎಂದು ಸಚಿವ ದೇಶಪಾಂಡೆ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಖಾತೆ ಸಚಿವ ಯು.ಟಿ.ಖಾದರ್, ಶಾಸಕ ರಾಜೇಶ್ ನಾಯ್ಕ್ , ಜಿಲ್ಲಾಧಿಕಾರಿ ಸಸಿ ಕಾಂತ್ ಸೆಂಥಿಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇ ಗೌಡ, ಮಂಗಳೂರು ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







