ಡಾ.ಆಚಾರ್ಯರ ಕನಸಿನ ಯೋಜನೆ ಜಾರಿಗೆ ಯತ್ನ: ಭಟ್
ಉಡುಪಿ ಶಾಸಕರ ಕಚೇರಿ ಉದ್ಘಾಟನೆ

ಉಡುಪಿ, ಜೂ.14: ಮಾಜಿ ಸಚಿವ, ಹಿರಿಯ ಮುತ್ಸದಿ ದಿ.ಡಾ.ವಿ.ಎಸ್. ಆಚಾರ್ಯರ ಅಭಿವೃದ್ಧಿಯ ಕನಸಿನ ಯೋಜನೆಗಳಿಗೆ ಮರುಜೀವ ಕೊಟ್ಟು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಕಟ್ಟಡದ ನೆಲ ಮಹಡಿಯಲ್ಲಿ ತಮ್ಮ ನೂತನ ಕಚೇರಿಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪಕ್ಷದ ಹಿರಿಯರು ಉದ್ಘಾಟಿಸಿದ ಬಳಿಕ ಅವರು ಮಾತನಾಡುತ್ತಿದ್ದರು.
ಮುಂದಿನ ಐದು ವರ್ಷಗಳ ಕಾಲ ಹಿರಿಯರ ಮಾರ್ಗದರ್ಶನ, ಪಕ್ಷದ ವರಿಷ್ಠರ ಸಲಹೆ ಸೂಚನೆಗಳಂತೆ ನಡೆದುಕೊಂಡು ಉಡುಪಿಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡುತ್ತೇನೆ. ಡಾ.ವಿ.ಎಸ್.ಆಚಾರ್ಯರು ಉಡುಪಿಯ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಅವರ ಕನಸುಗಳ ಅನುಷ್ಠಾನಕ್ಕೆ ಪ್ರಯತ್ನಿಸಿ, ಜನಸೇವೆ ಮಾಡುತ್ತೇನೆ ಎಂದರು.
ಶಾಸಕರ ಕಚೇರಿಯನ್ನು ಉದ್ಘಾಟಿಸಿದ ಪಕ್ಷದ ಹಿರಿಯ ನಾಯಕ ಎಂ. ಸೋಮಶೇಖರ್ ಭಟ್ ಮಾತನಾಡಿ, ಬಿಜೆಪಿಯ ಭದ್ರ ಕೋಟೆಯಾದ ಕರಾವಳಿ ಭಾಗದಲ್ಲಿ ಒಂದು ಕ್ಷೇತ್ರವನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರದಲ್ಲೂ ಬಿಜೆಪಿಗೆ ಗೆಲುವಾಗಿದೆ. ಉಡುಪಿ ನಗರಸಭೆಯನ್ನು ಮತ್ತೊಮ್ಮೆ ನಮ್ಮ ತೆಕ್ಕೆಗೆ ತೆಗೆದು ಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರೂ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಿರಿಯ ನಾಯಕ ಗುಜ್ವಾಡಿ ಪ್ರಭಾಕರ್ ನಾಯಕ್ ಮಾತನಾಡಿ ಉಡುಪಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಸಲಹೆ-ಸೂಚನೆಗಳನ್ನು ನೀಡಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ನಗರಸಭಾ ಮಾಜಿ ಉಪಾಧ್ಯಕ್ಷ ಎಸ್.ವಿಠಲ ಶೆಟ್ಟಿಗಾರ್, ಯಶ್ಪಾಲ್ ಸುವರ್ಣ, ರಾಘವೇಂದ್ರ ಕಿಣಿ, ಪ್ರವೀಣ್ ಕುಮಾರ್ ಕಪ್ಪೆಟ್ಟು, ಶ್ರೀಶ ನಾಯಕ್ ಪೆರ್ಣಂಕಿಲ, ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್, ಗಿರೀಶ್ ಅಂಚನ್, ಉಪೇಂದ್ರ ನಾಯಕ್, ಪುರುಷೋತ್ತಮ ಶೆಟ್ಟಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಸುವರ್ಧನ್ ನಾಯಕ್, ಸಂಧ್ಯಾ ರಮೇಶ್, ಪ್ರಭಾಕರ ಪೂಜಾರಿ, ಶಿಲ್ಪಾ ರಘುಪತಿ ಭಟ್, ಸರಸ್ವತಿ ಬಾರಿತ್ತಾಯ, ರಾಜೇಂದ್ರ ಪಂದುಬೆಟ್ಟು, ಬಾಲಕೃಷ್ಣ ಶೆಟ್ಟಿ, ್ರಾನ್ಸಿಸ್ ಮಿನೇಜಸ್, ಗೀತಾ ಶೇಟ್ ಮುಂತಾದವರು ಉಪಸ್ಥಿತರಿದ್ದರು.







