ರಕ್ತದಾನ ಶಿಬಿರ ಮುಂದುವರಿಯಲಿದೆ: ಜಿ.ಶಂಕರ್

ಬ್ರಹ್ಮಾವರ, ಜೂ.14: ಆಸ್ಪತ್ರೆಗಳಲ್ಲಿ ಬಡವರಿಗೆ ರಕ್ತಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲು ಬೇಕಾದ ನೀತಿಸಂಹಿತೆ ರೂಪಿಸಲು ಜಿಲ್ಲಾಡಳಿತದ ನೇತೃತ್ವದಲ್ಲಿ ಮುಖ್ಯಮಂತ್ರಿ, ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಕ್ತದಾನಿಗಳ ಸಭೆಯೊಂದನ್ನು ಕರೆದು ಚರ್ಚಿಸುವಂತೆ ತಾವು ಪ್ರಯತ್ನಿಸುವುದಾಗಿ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಇಲ್ಲಿನ ಶ್ಯಾಮಿಲಿ ಶನಾಯದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಳೆದ 10 ವರ್ಷಗಳಿಂದ ಮೊಗವೀರ ಯುವ ಸಂಘಟನೆ ಸಂಘಟಿಸುತ್ತಿರುವ ರಕ್ತದಾನ ಶಿಬಿರದಲ್ಲಿ ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹದ ಗುರಿಯನ್ನು ಸಾಧಿಸಿದ್ದೇವೆ. ಈ ಶಿಬಿರ ಇಲ್ಲಿಗೆ ಮುಗಿಯದೇ, ಮುಂದೆಯೂ ನಡೆಯಲಿದೆ. ಇದರಲ್ಲಿ ಜಿಲ್ಲಾಡಳಿತ ಪಾತ್ರ ಮುಖ್ಯವಾಗಿದೆ. ಅವರು ನಮ್ಮ ಸಂಘಟನೆ ಯೊಂದಿಗೆ ಸಹಕರಿಸಬೇಕು. ಬಡವರಿಗೆ ಸರಿಯಾಗಿ ರಕ್ತ ಸಿಗುವಂತೆ ನೋಡಿಕೊಳ್ಳಬೇಕು. ಇದಕ್ಕೊಂದು ಸಂಹಿತೆಯನ್ನು ರೂಪಿಸಬೇಕು ಎಂದರು.
ಮಣಿಪಾಲ ಕೆಎಂಸಿಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ಶಮಿ ಶಾಸ್ತ್ರಿ ಮಾತನಾಡಿ, ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿ ನಿಮಿಷವೂ ರೋಗಿಗೆ ರಕ್ತದ ಅಗತ್ಯವಿರುತ್ತದೆ. ಇಂಥ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳಿಂದ ಅಗತ್ಯ ರಕ್ತವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಲಭ್ಯತೆಯೊಂದಿಗೆ, ಅವುಗಳ ಸುರಕ್ಷತೆಯ ಬಗ್ಗೆಯೂ ನಾವು ಗಮನ ಹರಿಸಬೇಕಾಗಿದೆ ಎಂದರು.
ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ, ಆನಂದ ಸಿ.ಕುಂದರ್, ಯಶ್ಪಾಲ ಸುವರ್ಣ, ವಿನಯ ಕರ್ಕೇರ, ಗಣೇಶ್ ಕಾಂಚನ್ ಉಸ್ಥಿತರಿದ್ದರು. ಶಿವರಾಮ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





