ಅಳೇಕಲ ನುಸ್ರತುಲ್ ಮಸಾಕಿನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಫ್ತಾರ್‌ಕೂಟ

ಉಳ್ಳಾಲ, ಜೂ. 14: ಉಳ್ಳಾಲ ಅಳೇಕಲ ನುಸ್ರತುಲ್ ಮಸಾಕಿನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಪೊಸಕುರಲ್ ಬಳಗದ ಸಹಾಕಾರದಲ್ಲಿ 6ನೇ ವರ್ಷದ ಸೌಹಾರ್ದ ಇಫ್ತಾರ್‌ಕೂಟ ಹಳೆಕೋಟೆ ಸಯ್ಯದ್ ಮದನಿ ಉರ್ದು ಸಂಯುಕ್ತ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ತೊಕ್ಕೊಟು ಪೆರ್ಮನ್ನೂರು ಸಂತ ಸಬೆಸ್ಟಿಯನ್ ಧರ್ಮಕೇಂದ್ರದ ಸಹಾಯಕ ಧರ್ಮಗುರು ವಂ ಫಾ ಸ್ಟ್ಯಾನಿ ಪಿಂಟೋ ಮಾತನಾಡಿ ಮನುಷ್ಯತ್ವ ಕೇವಲ ಜಾತಿ-ಧರ್ಮಕ್ಕೆ ಸೀಮಿತವಾಗದೆ, ಮನುಷ್ಯತ್ವದ ತತ್ವಗಳನ್ನು ಒಳಗೊಂಡಿರಬೇಕು ಎಂದು ಆಶೀರ್ವಚನದ ಸೌಹಾರ್ದ ಸಂದೇಶ ನೀಡಿದರು.
ಎಲ್ಲಾ ಧರ್ಮದವರು ಒಟ್ಟುಸೇರಬೇಕು, ಒಂದೇ ರೀತಿಯ ಒಳ್ಳೆಯ ಪ್ರೀತಿಯ ಮನಸ್ಸನ್ನು ಕಟ್ಟಬೇಕು ಮತ್ತು ಒಳ್ಳೆಯ ಬಾಂಧವ್ಯವನ್ನು ಬೆಳೆಸಬೇಕು ಎನ್ನುವುದು ಸೌಹಾರ್ದ ಇಫ್ತಾರ್‌ಕೂಟದ ಉದ್ದೇಶ ಎಂದು, ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖೋಪಾಧ್ಯಯರು ಶ್ರೀ ರವೀಂದ್ರ ರೈ ಕಲ್ಲಿಮಾರ್ ಸೌಹಾರ್ದ ಸಂದೇಶ ನೀಡಿದರು.
ಉಪವಾಸ ಮಾಡುವುದು ಭಕ್ತಿಗಾಗಿ- ನಮ್ಮೊಳಗಿರುವ ಭಕ್ತಿ ಜಾಗೃತವಾದರೆ ನಾವು ಎಲ್ಲಿಯೂ ಸೋಲುವುದಿಲ್ಲ. ಯಾವುದೇ ಧರ್ಮದ ಆಶಯ ಮತ್ತು ಆದರ್ಶವನ್ನು ತೆಗೆದು ನೋಡಿದಾಗ, ಎಲ್ಲಾ ಅವಕಾಶಗಳು ಮುಗಿದು ಹೋದಾಗ, ಒಂದಷ್ಟು ನಿರೀಕ್ಷೆಯನ್ನು ಹುಟ್ಟುಹಾಕುವ ಒಂದು ಪ್ರಯತ್ನ ಸಾಧ್ಯತೆ ಇರುವುದಾದರೆ ಅದು ಧರ್ಮಕ್ಕೆ ಮಾತ್ರ ಎಂದು, ಚೊಕ್ಕಬೆಟ್ಟು ಜುಮಾಮಸೀದಿಯ ಖತೀಬರು ಬಹು ಮೌಲಾನಾ ಅಬ್ದುಲ್ ಅಝೀರ್ ದಾರಿಮಿ ಆಶೀರ್ವಚನದ ಧಾರ್ಮಿಕ ಸಂದೇಶ ನೀಡಿದರು.
ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಜ ಅಬ್ದುಲ್ ರಶೀದ್ ಹಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ನುಸ್ರತುಲ್ ಮಸಾಕಿನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಜ ಮಹಮ್ಮದ್ ತ್ವಾಹ ಹಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ಥಳೀಯ ಧರ್ಮಗುರು ಬಹು ಉಸ್ಮಾನ್ ಸಅದಿ ಉಸ್ತಾದ್ ದುವಾ ನಡೆಸಿಕೊಟ್ಟರು.
ಉಳ್ಳಾಲ ಹಳೆಕೋಟೆ ಸಯ್ಯದ್ ಮದನಿ ಉರ್ದು ಸಂಯುಕ್ತ ಶಾಲೆಯ ಮುಖೋಪಾಧ್ಯಾಯ ಕೆ.ಎಮ್.ಕೆ. ಮಂಜನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೊಸಕುರಲ್ ವಾಹಿನಿಯ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಪ್ರಸ್ತಾವನೆಗೈದರು.







