ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ: ಎಸ್.ಎಲ್ ಭೋಜೇಗೌಡ

ಚಿಕ್ಕಮಗಳೂರು, ಜೂ.14: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತತ ಗೆಲುವು ಸಾಧಿಸಿ ಪ್ರತಿನಿಧಿಸುತ್ತಿದ್ದರೂ ಶಿಕ್ಷಕರು, ಉಪನ್ಯಾಸಕರ ಯಾವ ಸಮಸ್ಯೆಗಳನ್ನೂ ಪರಿಹರಿಸುವಲ್ಲಿ ಅವರು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿಲ್ಲ. ಇದೇ ತನ್ನ ಗೆಲುವಿಗೆ ಸಹಕಾರಿಯಾಯಿತು ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಧಾನಸಭೆ ಸದಸ್ಯರಾಗಿರುವ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದ ಬಳಿಕ ಗುರುವಾರ ಚಿಕ್ಕಮಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ವಿಶ್ವಾಸಗಳಿಸುವಲ್ಲಿ ತಾನು ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಗೆಲುವು ಸಾಧ್ಯವಾಗಿದೆ. ಈ ಗೆಲುವಿನಿಂದಾಗಿ ತನ್ನ ಜವಬ್ದಾರಿಗಳೂ ಹೆಚ್ಚಾಗಿದ್ದು, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಒತ್ತುಕೊಟ್ಟು ಕೆಲಸ ಮಾಡುತ್ತೇನೆ. ವಿರೋಧ ಪಕ್ಷಗಳ ಮುಖಂಡರು ಹಾಗೂ ಜನಪ್ರತಿನಿಧಿಗಳು ಜಿಲ್ಲೆಯ ಸಮಸ್ಯೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕೆಂದರು.
ರಾಜಕೀಯ ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರದಲ್ಲಿದ್ದಾಗ ಜನರಿಗಾಗಿ ಮಾಡಿದ ಕೆಲಸಗಳೇ ಶಾಶ್ವತ. ಜಿಲ್ಲೆಯ ಬಯಲುಸೀಮೆ ತಾಲೂಕುಗಳಲ್ಲಿ ತೀವ್ರ ನೀರಾವರಿ ಸಮಸ್ಯೆ ಇದೆ. ಮಲೆನಾಡು ತನ್ನದೇ ಆದ ಜ್ವಲಂತ ಸಮಸ್ಯೆಗಳನ್ನು ಹೊಂದಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆಂದ ಅವರು, ಜಿಲ್ಲೆಯನ್ನು ಕಾಡುತ್ತಿರುವ ನೀರಾವರಿ ಸಮಸ್ಯೆ, ಬಯಲು ಸೀಮೆ ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಕೆಲಸ ಮಾಡುತ್ತೇನೆ. ಈ ಸಂಬಂಧ ಸಿಎಂ ಹಾಗೂ ನೀರಾವರಿ ಸಚಿವರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ನೀರಾವರಿ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದು, ನೀರಾವರಿ ಸಮಸ್ಯಗಳ ಪರಿಹಾರಕ್ಕೆ ಅವರು ಅಗತ್ಯ ನೆರವು ನೀಡಲಿದ್ದಾರೆಂದರು.
ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಪ್ರಾರಂಭವಾದ ಕರಗಡ ಕುಡಿಯುವ ನೀರಾವರಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಸಮಿಶ್ರ ಸರಕಾರದಲ್ಲಿ ಅವರು ಮತ್ತೇ ಸಿಎಂ ಆಗಿದ್ದಾರೆ. ಅವರ ಅವಧಿಯಲ್ಲಿ ಕರಗಡ ಕುಡಿಯುವ ನೀರಾವರಿ ಯೋಜನೆ ಪೂರ್ಣಗೊಳಿಸಿ ಆ ಭಾಗದ ರೈತರ ನೋವನ್ನು ಪರಿಹರಿಸುವ ಕೆಲಸ ಮಾಡುತ್ತೇನೆಂದ ಅವರು, ಬಯಲು ಸೀಮೆ ಭಾಗದ ತಾಲೂಕುಗಳಾದ ಕಡೂರು, ತರೀಕೆರೆ ಭಾಗದ ಅಯ್ಯನಕೆರೆ, ಮದಗದ ಕೆರೆ ನೀರು ತುಂಬಿಸುವ ಯೋಜನೆಗೆ ಈಗಾಗಲೇ ಸಣ್ಣ ನೀರಾವರಿ ಇಲಾಖೆ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆ ಪರಿಹಾರಕ್ಕೆ ವಿರೋಧ ಪಕ್ಷದ ಶಾಸಕರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಲು ಸಹಕರಿಸಿದ ಶಿಕ್ಷಕರು, ಉಪನ್ಯಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಚಂದ್ರಪ್ಪ, ಮಂಜಪ್ಪ, ಬೈರೆಗೌಡ, ಜಯರಾಜ್ ಅರಸ್, ರಮೇಶ್, ದೇವಿಪ್ರಸಾದ್, ಹೊಲದಗದ್ದೆ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.







