ಅತೀವೃಷ್ಟಿಗೆ ಜಿಲ್ಲಾದ್ಯಂತ 4.56 ಕೋಟಿ ರೂ. ನಷ್ಟ: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

ಚಿಕ್ಕಮಗಳೂರು, ಜೂ.14: ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.228 ರಷ್ಟು ಹೆಚ್ಚು ಪ್ರಮಣದಲ್ಲಿ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನ ನಾಲ್ಕು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಬಯಲು ಸೀಮೆ ಭಾಗವಾದ ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ವಾಡಿಕೆಗಿಂತ ಶೇ.150 ರಷ್ಟು ಮಳೆಯಾಗಿದೆ. ಜಿಲ್ಲಾದ್ಯಂತ ಸತತ ಸುರಿಯುತ್ತಿರುವ ಮಳೆಯಿಂದ ಯಾವುದೇ ಜೀವ ಹಾನಿಯಾದ ವರದಿಯಾಗಿಲ್ಲ. ಆದರೆ ಸಾಕಷ್ಟು ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಮಳೆಯಿಂದ 9 ಜಾನುವಾರುಗಳು ಸಾವನ್ನಪ್ಪಿದ್ದು, 7 ಜಾನುವಾರು ಮಾಲಕರಿಗೆ ಪರಿಹಾರ ನೀಡಲಾಗಿದೆ. 18 ಮನೆಗಳಿಗೆ ಹಾನಿಯಾಗಿದ್ದು, 10 ಮನೆಗಳಿಗೆ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಸಮೀಕ್ಷೆ ನಡೆಸಿ ಉಳಿದ ಮನೆಗಳಿಗೆ ಪರಿಹಾರ ಧನ ನೀಡಲಾಗುವುದು ಎಂದು ತಿಳಿಸಿದರು.
ಮಳೆಯಿಂದ ರಸ್ತೆ, ಚರಂಡಿ, ಸೇತುವೆಗಳಿಗೆ ಹಾನಿಯಾಗಿದ್ದು, ಸುಮಾರು 4 ಕೋಟಿ 56 ಲಕ್ಷ ರೂ. ನಷ್ಟ ಉಂಟಾಗಿದೆ. ವಿದ್ಯುತ್ ಮಾರ್ಗಗಳ ಮೇಲೆ ಮರಬಿದ್ದು ಮೆಸ್ಕಾಂ ಇಲಾಖೆಗೆ 2ಕೋಟಿ ರೂ. ನಷ್ಟ ಉಂಟಾಗಿದೆ. ಮಲೆನಾಡು ಭಾಗದಲ್ಲಿ ಭಾರೀ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಉರುಳಿ ವಿದ್ಯುತ್ ಸರಬರಾಜಿನಲ್ಲಿ ವಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ವಿದ್ಯುತ್ ಮಾರ್ಗಗಳ ದುರಸ್ತಿಗೆ ಕ್ರಮವಹಿಸಲಾಗುವುದು ಎಂದರು.
ಬುಧವಾರ ದತ್ತಪೀಠ, ಅತ್ತಿಗುಂಡಿ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾದ ತಕ್ಷಣ ಸರಿಪಡಿಸಲಾಗಿದೆ. ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಯಾವುದೇ ಅವಘಾಡಕ್ಕೆ ಅವಕಾಶ ನೀಡದಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ತುಂಗಾ, ಭದ್ರಾ ನದಿ ತೀರ ಪ್ರದೇಶದ ಜನ-ಜಾನುವಾರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ. ಯಾವುದೇ ಗ್ರಾಮಗಳಿಗೆ ನೀರು ನುಗ್ಗಿರುವ ಘಟನೆ ವರದಿಯಾಗಿಲ್ಲ, ಮಳೆಯಿಂದ ಆದ ನಷ್ಟದ ಬಗ್ಗೆ ವರದಿ ನೀಡುವಂತೆ ತಾಲೂಕಿನ ಉಪವಿಭಾಗಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಳೆ ಪ್ರಮಾಣ ಕಡಿಮೆಯಾದ ನಂತರ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು.
ಕೊಪ್ಪ, ಶೃಂಗೇರಿ ಭಾಗದಲ್ಲಿ ಮರಬಿದ್ದು, ಮಳೆನೀರು ನಿಂತು ಅಡಿಕೆ ಬಾಳೆ ತೋಟಗಳಲ್ಲಿ 50ಲಕ್ಷ ರೂ. ಹಾನಿಯಾದ ಬಗ್ಗೆ ವರದಿಯಾಗಿದೆ. ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದ ಅವರು, ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಶೀಘ್ರ ಕ್ರಮಕೈಗೊಂಡು ರಸ್ತೆ ತೆರವುಗೊಳಿಸಿ ಸವಾರರಿಗೆ ಅನುಕೂಲ ಮಾಡಿಕೊಡಲಾಯಿತು. ಮಂಗಳೂರು ಹೋಗುವ ಸವಾರರಿಗೆ ಕೊಟ್ಟಿಗೆಹಾರ, ಕಳಸ, ಕುದುರೆಮುಖ ಮಾರ್ಗವಾಗಿ ಸಂಚಾರಕ್ಕೆ ತುರ್ತು ವ್ಯವಸ್ಥೆ ಕಲ್ಪಿಸಲಾಯಿತು ಎಂದರು.
ಮಳೆಯ ವಾಸ್ತವ ಸ್ಥತಿಯನ್ನು ಅರಿತು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಮಳೆಯ ತೀವ್ರತೆ ಕಡಿಮೆ ಇರುವುದರಿಂದ ಶಾಲೆ ಕಾಲೇಜುಗಳು ಎಂದಿನಂತೆ ನಡೆಯುತ್ತೀವೆ. ಕಂದಾಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಸೂಚನೆ ನೀಡಲಾಗಿದೆ. ಎಸ್.ಕೆ. ಬಾರ್ಡರ್ ರಸ್ತೆಯಲ್ಲಿ ಮರಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು, ತಕ್ಷಣ ಮರ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ ಎಂದರು.







