ಸಂತ ಆಂತೋನಿಯ ವಾರ್ಷಿಕ ಮಹೋತ್ಸವ

ಮಂಗಳೂರು, ಜೂ.14: ಮಂಗಳೂರು ಧರ್ಮ ಪ್ರಾಂತದ ಅಧ್ಯಕ್ಷ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಬುಧವಾರ ನಗರದ ಮಿಲಾಗ್ರಿಸ್ ಚರ್ಚ್‌ನಲ್ಲಿ ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು ಸಂತ ಆಂತೋನಿಯವರಂತೆ ಜನರಲ್ಲಿ ಅನುಕಂಪ ತೋರಬೇಕು. ಸಂತ ಆಂತೋನಿ ಜೀವಿಸಿದ್ದು ಕೇವಲ 36 ವರುಷ. ಆದರೆ ಆ ಚಿಕ್ಕ ಜೀವಿತಾವಧಿಯಲ್ಲಿ ಅವರು ತಮ್ಮ ಸ್ನೇಹಮಯಿ ಬದುಕಿನ ಮೂಲಕ ಸಮಾಜಕ್ಕೆ ಬಿಟ್ಟು ಹೋದ ಕೆಲಸ ಕಾರ್ಯಗಳು ಅಪಾರ. ಸಂತ ಆಂತೋನಿ ಇಹಲೋಕ ತ್ಯಜಿಸಿ ಎಂಟು ಶತಮಾನಗಳು ಕಳೆದರೂ ಪ್ರಪಂಚದೆಲ್ಲೆಡೆ ಅವರನ್ನು ಸ್ಮರಿಸಲಾಗುತ್ತದೆ ಎಂದರು.
ಈ ಮಧ್ಯೆ ಬಿಷಪರು ಜೆಪ್ಪುಸಂತ ಆಂತೋನಿ ಆಶ್ರಮದಲ್ಲಿ ವಿಶೇಷ ಬಲಿಪೂಜೆ ಅರ್ಪಿಸಿದರು. ಬಲಿಪೂಜೆಯ ಬಳಿಕ ಪುಣ್ಯ ಕ್ಷೇತ್ರದ 120ನೇ ವರ್ಷದ ಸವಿ ನೆನಪಿಗಾಗಿ ಮನೋರೋಗಿಗಳಿಗಾಗಿ ನಿರ್ಮಿಸಲಿರುವ 100 ಹಾಸಿಗೆಯ ಸುಸಜ್ಜಿತ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಟ್ಟಡ ನಿರ್ಮಾಣಕ್ಕೆ ಸರಕಾರದ ವತಿಯಿಂದ 5 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಮೊಗಾಚಿ ಲಾರ್ಹಾಂ ಖ್ಯಾತಿಯ ವಿನ್ಸೆಂಟ್ ಫೆರ್ನಾಂಡಿಸ್ ರಚಿಸಿದ ಮತ್ತು ಜೋನ್ ಎಂ. ಪೆರ್ಮನ್ನೂರು ರಚಿಸಿದ ನಿರ್ದೇಶನ ಮಾಡಿದ ಸಾಂತ್ ಆಂತೊನ್ ಅಚರ್ಯಾಂಚೊ ಸಾಂತ್(ಪವಾಡ ಪುರುಷ ಸಂತ ಆಂತೋನಿ) ಕೊಂಕಣಿ ನಾಟಕ ಪ್ರದರ್ಶಿಸಿದರು.
ಧರ್ಮಪ್ರಾಂತದ ಶ್ರೇಷ್ಠ ಗುರು ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು ಮಿಲಾಗ್ರಿಸ್ ಚರ್ಚ್‌ನಲ್ಲಿ ಹಬ್ಬದ ಮೊದಲ ಬಲಿ ಪೂಜೆ ಅರ್ಪಿಸಿದರು. ಸಂಜೆ ಫಾ.ಜೇಕಬ್ ಮಿಲ್ಟನ್ ಮಲಯಾಳಂನಲ್ಲಿಬಲಿ ಪೂಜೆ ಅರ್ಪಿಸಿದರು. ಸಹ ಗುರುಗಳಾದ ಫಾ. ಫ್ರಾನ್ಸಿಸ್ ಡಿಸೋಜ ಮತ್ತು ಫಾ. ತ್ರಿಶಾನ್ ಡಿಸೋಜ ವಂದಿಸಿದರು.







