ಹತ್ಯೆಗೆ ಕ್ಷಣ ಮುನ್ನವೂ ಪತ್ರಿಕಾಧರ್ಮ ಸಮರ್ಥಿಸಿಕೊಂಡಿದ್ದ ಬುಖಾರಿ

ಶ್ರೀನಗರ, ಜೂ.15: ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಯಾಗುವ ಕ್ಷಣ ಕಾಲ ಮುನ್ನ ಕೂಡಾ ರೈಸಿಂಗ್ ಕಾಶ್ಮೀರ್ ಸಂಪಾದಕ ಶುಜಾತ್ ಬುಖಾರಿ ತಮ್ಮ ಪತ್ರಿಕಾ ಧರ್ಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ದೆಹಲಿ ಮೂಲದ ಪತ್ರಕರ್ತರೊಬ್ಬರು ಬುಖಾರಿ ವಿರುದ್ಧ ಕಾಶ್ಮೀರ ಬಗ್ಗೆ ಪಕ್ಷಪಾತ ವರದಿ ಮಾಡುತ್ತಿದ್ದೀರಿ ಎಂದು ಆಪಾದಿಸಿದಾಗ ಟ್ವಿಟ್ಟರ್‌ನಲ್ಲಿ ತಮ್ಮ ಪತ್ರಿಕಾಧರ್ಮವನ್ನು ಬುಖಾರಿ ಸಮರ್ಥನೆ ಮಾಡಿಕೊಂಡಿದ್ದರು. ಜತೆಗೆ ಕಣಿವೆ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗೆಗಿನ ವಿಶ್ವಸಂಸ್ಥೆ ವರದಿಯನ್ನು ಪೋಸ್ಟ್ ಮಾಡಿದ್ದರು.ತಮ್ಮ ಕೊನೆಯ ಟ್ವೀಟ್‌ನಲ್ಲಿ ಬುಖಾರಿ, ಮೊಟ್ಟಮೊದಲ ಬಾರಿಗೆ ಕಾಶ್ಮೀರ ಬಗೆಗಿನ ವಿಶ್ವಸಂಸ್ಥೆಯ ಮಾನವಹಕ್ಕು ವರದಿ ಬಹು ಉಲ್ಲಂಘನೆ ಪ್ರಕರಣಗಳ ಬಗ್ಗೆ ಅಂತರರಾಷ್ಟ್ರೀಯ ತನಿಖೆಗೆ ಕರೆ ನೀಡಿದೆ ಎಂದು ಹೇಳಿದ್ದರು. ಸದಾ ಈ ಬಗ್ಗೆ ಗಟ್ಟಿ ಧ್ವನಿ ಎತ್ತುತ್ತಿದ್ದ ಬುಖಾರಿ ಮತ್ತೊಂದು ಟ್ವೀಟ್‌ನಲ್ಲಿ, ಕಾಶ್ಮೀರದಲ್ಲಿ ನಾವು ಹೆಮ್ಮೆಯಿಂದ ಪತ್ರಿಕೋದ್ಯಮ ನಡೆಸುತ್ತಿದ್ದೇವೆ. ರಾಜ್ಯದ ವಾಸ್ತವ ಚಿತ್ರಣವನ್ನು ಹೈಲೈಟ್ ಮಾಡುವುದು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.ಈ ಭೀಕರ ಹತ್ಯೆ ಬಗ್ಗೆ ಕಾಳ್ಗಿಚ್ಚಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿದಾಗ, ರಾಜಕಾರಣಿಗಳು, ಪತ್ರಕರ್ತರು ಹಾಗೂ ಜನಸಾಮಾನ್ಯರು ಈ ಬರ್ಬರ ಕೃತ್ಯದ ಬಗ್ಗೆ ಖಂಡನೆ ಮತ್ತು ಆಘಾತ ವ್ಯಕ್ತಪಡಿಸಿದರು. ರೈಸಿಂಗ್ ಕಾಶ್ಮೀರ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಹೇಯ ಕೃತ್ಯ. ಇದು ಕಾಶ್ಮೀರಪರ ಧ್ವನಿಯನ್ನು ಹತ್ತಿಕ್ಕುವ ಹುನ್ನಾರ. ಅವರೊಬ್ಬ ಸಾಹಸಿ ಹಾಗೂ ನಿರ್ಭೀತ ಪತ್ರಕರ್ತ. ಅವರ ಹತ್ಯೆಯಿಂದ ತೀವ್ರ ಆಘಾತ ಹಾಗೂ ದುಃಖವಾಗಿದೆ ಎಂದು ಗೃಹಸಚಿವ ರಾಜ್‌ನಾಥ್ ಸಿಂಗ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.





