ಬೆತ್ತಲುಗೊಳಿಸಿ ದಲಿತ ಯುವಕರಿಗೆ ಥಳಿತ, ನಗ್ನ ಮೆರವಣಿಗೆ!

ಸಾಂದರ್ಭಿಕ ಚಿತ್ರ
ಮುಂಬೈ, ಜೂ.15: ಗ್ರಾಮದ ಬಾವಿಯಲ್ಲಿ ಈಜಿದ ಆರೋಪದಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ದಲಿತ ಯುವಕರನ್ನು ಬಟ್ಟೆ ಬಿಚ್ಚಿಸಿ, ಹಲ್ಲೆ ನಡೆಸಿ ಬಳಿಕ ನಗ್ನವಾಗಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಈ ಘಟನೆ ಜೂನ್ 10ರಂದು ನಡೆದಿದ್ದು, ವಕಾಡಿ ಗ್ರಾಮದಲ್ಲಿ ಈ ಯುವಕರ ಬೆತ್ತಲು ಮೆರವಣಿಗೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾದರು. ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನೀಖೆ ನಡೆಯುತ್ತಿದೆ ಎಂದು ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆ ಸಚಿವ ದಿಲೀಪ್ ಕಾಂಬ್ಳೆ ಹೇಳಿದ್ದಾರೆ.
ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ಕೂಡಾ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 12-14 ವಯಸ್ಸಿನ ದಲಿತ ಹುಡುಗರು ಭಾನುವಾರ ತೀವ್ರ ಸೆಖೆ ಹಿನ್ನೆಲೆಯಲ್ಲಿ ಗ್ರಾಮದ ಬಾವಿಗೆ ಧುಮುಕಿ ಈಜಾಡುತ್ತಿದ್ದರು ಎನ್ನಲಾಗಿದೆ. ಇದನ್ನು ತಿಳಿದ ಗ್ರಾಮಸ್ಥರು ಅದರಲ್ಲೂ ಮುಖ್ಯವಾಗಿ ಮೇಲ್ವರ್ಗದವರು ಬಾವಿ ಬಳಿ ಸೇರಿ ಅವರನ್ನು ನೀರಿನಿಂದ ಹೊರಕ್ಕೆಳೆದು ಥಳಿಸಿದರು ಎನ್ನಲಾಗಿದೆ.ಇದನ್ನು ಯುವಕರು ಪ್ರತಿಭಟಿಸಿದಾಗ, ಕೆಲವರು ಬಟ್ಟೆ ಬೆಚ್ಚಿಸಿ ನಗ್ನವಾಗಿ ಮೆರವಣಿಗೆ ನಡೆಸಿದರು ಎಂದು ದೂರಲಾಗಿದೆ. ಮಕ್ಕಳು ಕೇವಲ ಚಪ್ಪಲಿ ಹಾಗೂ ಮರದ ಎಲೆಯನ್ನು ಹಿಡಿದುಕೊಂಡಿರುವ ವಿಡಿಯೊ ಹರಿದಾಡುತ್ತಿದೆ. ಒಬ್ಬ ವ್ಯಕ್ತಿ ಚಾಟಿಯಿಂದ ಕಾಲು ಮತ್ತು ಬೆನ್ನಿನ ಮೇಲೆ ಹೊಡೆಯುತ್ತಿರುವ ದೃಶ್ಯ ದಾಖಲಾಗಿದೆ.







