ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅಂತ್ಯಕ್ರಿಯೆ
ಹತ್ಯೆಕೋರರ ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿದ ಕಾಶ್ಮೀರ ಪೊಲೀಸರು

ಶ್ರೀನಗರ, ಜೂ.15: ಗುರುವಾರ ಸಂಜೆ ಅಜ್ಞಾತ ಬಂದೂಕುಧಾರಿಗಳ ಗುಂಡೇಟಿಗೆ ಬಲಿಯಾಗಿರುವ ಹಿರಿಯ ಪತ್ರಕರ್ತ, ಶ್ರೀನಗರ ಮೂಲದ ಪತ್ರಿಕೆ ‘ರೈಸಿಂಗ್ ಕಾಶ್ಮೀರ್’ನ ಪ್ರಧಾನ ಸಂಪಾದಕ ಶುಜಾತ್ ಬುಖಾರಿ ಅಂತ್ಯಕ್ರಿಯೆ ಕಾಶ್ಮೀರದ ಬಾರಾಮುಲ್ಲಾದಲ್ಲಿ ಶುಕ್ರವಾರ ನೆರವೇರಿದ್ದು, ನೂರಾರು ಜನರು ಬುಖಾರಿಯವರಿಗೆ ಅಂತಿಮ ನಮನ ಸಲ್ಲಿಸಿದರು.
52ರ ಹರೆಯದ ಬುಖಾರಿ ಅವರನ್ನು ಸಾಯಿಸಲು ಮೂವರು ಬಂದೂಕುದಾರರು ಬೈಕ್‌ನಲ್ಲಿ ಬಂದಿರುವ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಬುಖಾರಿ ಶ್ರೀನಗರದ ಪ್ರೆಸ್ ಕಾಲನಿಯ ತನ್ನ ಕಚೇರಿಯಲ್ಲಿರುವಾಗಲೇ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಹತ್ಯೆಕೋರರು ಮುಖಕ್ಕೆ ಹೆಲ್ಮೆಟ್ ಹಾಗೂ ಮುಸುಕು ಧರಿಸಿದ್ದರು. ಹತ್ಯೆಕೋರರು ಬೈಕ್‌ನಲ್ಲಿ ಬಂದ ಸಿಸಿಟಿವಿ ದೃಶ್ಯವನ್ನು ಜಮ್ಮು-ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಪತ್ರಕರ್ತರು, ರಾಜಕಾರಣಿಗಳು ಹಾಗೂ ಹಿತೈಷಿಗಳು ಬುಖಾರಿ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಬುಖಾರಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. 18 ವರ್ಷಗಳ ಹಿಂದೆ ಬುಖಾರಿ ಹತ್ಯೆ ಯತ್ನ ನಡೆದ ಕಾರಣ ಅವರಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಭಯೋತ್ಪಾದಕರ ಹಿಟ್ ಲಿಸ್ಟ್‌ನಲ್ಲಿ ಬುಖಾರಿ ಹೆಸರಿತ್ತು.





