ಸಾಲ ತೀರಿಸಲು ಈ ವೃದ್ಧೆ ಮಾಡುತ್ತಿರುವ ಕೆಲಸಕ್ಕೆ ಸೆಹ್ವಾಗ್‌ರಿಂದ ಸೆಲ್ಯೂಟ್

ಭೋಪಾಲ್, ಜೂ.15: ನಮ್ಮ ದೇಶದಲ್ಲಿ ಕೋಟ್ಯಂತರ ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗುತ್ತಿರುವ ಉದ್ಯಮಿಗಳ ನಡುವೆ ಸಾಲ ತೀರಿಸಲು ಇಳಿ ವಯಸ್ಸಿನಲ್ಲೂ ಮೈಮುರಿದು ಕೆಲಸ ಮಾಡುತ್ತಿರುವವರು ನಮ್ಮ ನಡುವೆ ಇದ್ದಾರೆ ಎನ್ನುವುದು ಹೆವ್ಮೆುಯ ವಿಷಯ.
ಮಧ್ಯಪ್ರದೇಶದ ಸೆಹೋರ್‌ನ ಜಿಲ್ಲಾಧಿಕಾರಿ ಕಚೇರಿಯ ಎದುರು ದಾಖಲೆಗಳ ಟೈಪಿಂಗ್ ಮಾಡುತ್ತಾ ಸಾಲ ತೀರಿಸುವ ಜೊತೆಗೆ ಜೀವನ ನಿರ್ವಹಿಸುತ್ತಿರುವ 72ರ ಪ್ರಾಯದ ಲಕ್ಷ್ಮೀ ಬಾಯಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ವೇಗವಾಗಿ ಟೈಪಿಂಗ್ ಮಾಡುವ ಲಕ್ಷ್ಮೀಬಾಯಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಲಕ್ಷ್ಮೀಬಾಯಿಯನ್ನು ‘ಸೂಪರ್‌ವುಮೆನ್’ ಎಂದು ಟ್ವಿಟರ್‌ನಲ್ಲಿ ಹಾಡಿ ಹೊಗಳಿದ್ದಾರೆ.
‘‘ಲಕ್ಷ್ಮೀಬಾಯಿ ನನ್ನ ಪಾಲಿಗೆ ಸೂಪರ್‌ವುಮೆನ್. ಇವರು ಮಧ್ಯಪ್ರದೇಶದ ಸೆಹೋರ್‌ನಲ್ಲಿ ವಾಸವಾಗಿದ್ದು ಇವರಿಂದ ಯುವಕರು ಬಹಳಷ್ಟು ಪಾಠ ಕಲಿತುಕೊಳ್ಳಬೇಕಾಗಿದೆ. ಯಾವ ಕೆಲಸವೂ ಸಣ್ಣದಲ್ಲ, ಇದಕ್ಕೆ ವಯಸ್ಸಿನ ಮಾನದಂಡವೂ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅವರಿಗೆ ನನ್ನ ನಮಸ್ಕಾರ’’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
‘‘ನಾನು ಸಾಲ ತೀರಿಸಲು ಟೈಪಿಂಗ್ ಕೆಲಸ ಮಾಡುತ್ತಿದ್ದೇನೆ. ನನ್ನ ಮಗಳು ಅಪಘಾತದಲ್ಲಿ ಮೃತಪಟ್ಟ ಬಳಿಕ ಈ ಕೆಲಸ ಮಾಡಲಾರಂಭಿಸಿದ್ದೆ. ನಾನು ಭಿಕ್ಷೆ ಬೇಡಲಾರೆ. ಜಿಲ್ಲಾಧಿಕಾರಿ ರಾಘವೇಂದ್ರ ಸಿಂಗ್ ಹಾಗೂ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಭಾವನರಿಂದ ನನಗೆ ಈ ಕೆಲಸ ಲಭಿಸಿದೆ. ವೀರೇಂದ್ರ ಸೆಹ್ವಾಗ್ ನನ್ನ ವಿಡಿಯೋವನ್ನು ಹಂಚಿದ್ದನ್ನು ಕೇಳಿ ನನಗೆ ತುಂಬಾ ಸಂತೋಷವಾಗುತ್ತಿದೆ. ಸಾಲ ತೀರಿಸಲು ಹಾಗೂ ಸ್ವಂತ ಮನೆ ನಿರ್ಮಿಸಿಕೊಳ್ಳಲು ನನಗೆ ಸಹಾಯದ ಅಗತ್ಯವಿದೆ’’ ಎಂದು ಲಕ್ಷ್ಮೀಬಾಯಿ ಹೇಳಿದ್ದಾರೆ.







