ಆದೇಶ ಎತ್ತಿ ಹಿಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ಅಡ್ವೈಸರಿ ಬೋರ್ಡ್
ರೌಡಿಶೀಟರ್ ವಿಶ್ವನಾಥ ಶೆಟ್ಟಿಗೆ ಗೂಂಡಾ ಕಾಯ್ದೆ

ಉಡುಪಿ, ಜೂ. 15: ನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್ ವಿಶ್ವನಾಥ ಶೆಟ್ಟಿ (35) ಎಂಬಾತನ ವಿರುದ್ಧ ಜಿಲ್ಲಾ ಪೊಲೀಸರು ಸಲ್ಲಿಸಿರುವ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹೊರಡಿಸಿರುವ ಗೂಂಡಾ ಕಾಯ್ದೆಯ ಆದೇಶವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಅಡ್ವೈಸರಿ ಬೋರ್ಡ್ ಎತ್ತಿ ಹಿಡಿದಿದೆ.
ಉಡುಪಿ ತಾಲೂಕಿನ ಕೊರಂಗ್ರಪಾಡಿ ಮಾನಸ ಗೇಟ್ ಬಳಿ ನಿವಾಸಿ ವಿಶ್ವನಾಥ ಶೆಟ್ಟಿ ಜಿಲ್ಲೆಯಲ್ಲಿ ಗೂಂಡಾ ಪ್ರವೃತ್ತಿಯನ್ನು ಹೊಂದಿದ್ದು, ಆತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆ ಪೈಕಿ ಕುಖ್ಯಾತ ರೌಡಿ ನಾಗೇಶ್ ಯಾನೆ ಪಿಟ್ಟಿ ನಾಗೇಶ್ ಕೊಲೆ ಪ್ರಕರಣವೂ ಸೇರಿಕೊಂಡಿದೆ.
ಆತನ ಗೂಂಡಾ ಪ್ರವೃತ್ತಿಯನ್ನು ಹತ್ತಿಕ್ಕುವ ಸಲುವಾಗಿ ಉಡುಪಿ ಜಿಲ್ಲಾ ಪೊಲೀಸರು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಗೂಂಡಾ ಕಾಯ್ದೆ ವಿಸುವಂತೆ ವರದಿ ಸಲ್ಲಿಸಿದ್ದರು. ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ 2018 ರ ಮೇ 3 ರಂದು ಗೂಂಡಾ ಕಾಯ್ದೆಯ ಆದೇಶ ಹೊರಡಿಸಿದ್ದು, ಮೇ 4 ರಂದು ಆರೋಪಿಯನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಅಟ್ಟಲಾಗಿತ್ತು.
ಜೂ. 2 ರಂದು ಕರ್ನಾಟಕ ಉಚ್ಛ ನ್ಯಾಯಾಲಯದ ಅಡ್ವೈಸರಿ ಬೋರ್ಡ್ ಕೂಡಾ ಆರೋಪಿಯ ವಿರುದ್ಧ ಹೊರಡಿಸಿದ ಗೂಂಡಾ ಕಾಯ್ದೆ ಆದೇಶವನ್ನು ಎತ್ತಿ ಹಿಡಿದಿದೆ. ಆರೋಪಿ ವಿಶ್ವನಾಥ ಶೆಟ್ಟಿ ಸದ್ಯ ಬಂಧಿತನಾಗಿದ್ದು, ಮುಂದಿನ ಒಂದು ವರ್ಷಗಳ ಕಾಲ ಬಳ್ಳಾರಿ ಕಾರಾಗೃಹದಲ್ಲಿ ಬಂಧಿತನಾಗಿರುತ್ತಾನೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.







