ವಿರಾಜಪೇಟೆ: ಕೆರೆಯಲ್ಲಿ ಮುಳುಗಿ ಇಬ್ಬರು ಕಾರ್ಮಿಕರು ಮೃತ್ಯು

ಮಡಿಕೇರಿ, ಜೂ.15 : ಕೆರೆಯ ಬದಿಯಲ್ಲಿರಿಸಿದ್ದ ಬೋಟ್‌ನಲ್ಲಿ ತೆರಳಿದ ಕಾರ್ಮಿಕರಿಬ್ಬರು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿರುವ ಘಟನೆ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೀರಾಜಪೇಟೆ ಸಮೀಪದ ಚೊಕಂಡಳ್ಳಿ ಗ್ರಾಮದ ಡಿ.ಎಚ್. ಮೊಯ್ದು ಎಂಬವರ ಹೊಸಕೋಟೆಯ ತೋಟದಲ್ಲಿ ಕೂಲಿ ಕಾರ್ಮಿಕರಾಗಿದ್ದ ಮಹೇಶ್ ಅಲಿಯಾಸ್ ರಾಜು (39) ಎಂಬವರು ಕೆರೆಯಲ್ಲಿದ್ದ ಸಣ್ಣ ಬೋಟ್‌ನಲ್ಲಿ ಕುಳಿತು ತುಂಬಿದ ಕೆರೆಯ ನೀರಿನಲ್ಲಿ ಹೊರಟಾಗ ಸ್ವಲ್ಪ ದೂರದಲ್ಲಿಯೇ ಬೋಟ್ ಮಗುಚಿಕೊಂಡು ಮಹೇಶ್ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡ ಪಣಿ ಎರವರ ಅಣ್ಣು (28) ಎಂಬವರು ಮಹೇಶ್‌ನನ್ನು ಮೇಲೆತ್ತಲು ಹೋದಾಗ ಇಬ್ಬರೂ ದಡ ಸೇರಲು ಸಾಧ್ಯವಾಗದೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮಹೇಶ್ ಅವರ ಪತ್ನಿ ಗೌರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ.
Next Story





