ಭಾರತೀಯ ವಾಯುಸೇನೆಯ ಪ್ರಪ್ರಥಮ ದಕ್ಷಿಣ ಭಾರತೀಯ ಮಹಿಳಾ ಫೈಟರ್ ಪೈಲಟ್
ಚಿಕ್ಕಮಗಳೂರಿನ ಹೆಮ್ಮೆಯ ಮಗಳು ಮೇಘನಾ ಶಾನುಭೋಗ್

ಇಂದು ದುಂಡಿಗಲ್ ನ ಏರ್ ಫೋರ್ಸ್ ಅಕಾಡಮಿಯಿಂದ ತನ್ನ ಪದವಿ ಪಡೆದಿರುವ ಫ್ಲೈಯಿಂಗ್ ಆಫೀಸರ್ ಚಿಕ್ಕಮಗಳೂರಿನ ಮೇಘನಾ ಶಾನುಭೋಗ್ ಭಾರತೀಯ ವಾಯುಸೇನೆಯ ಹೊಸ ಪೋಸ್ಟರ್ ಗರ್ಲ್ ಆಗಿದ್ದಾರೆ.
ಶನಿವಾರ ನಡೆದ ಆಕರ್ಷಕ ಕಂಬೈನ್ಡ್ ಗ್ರಾಜುವೇಶನ್ ಪೆರೇಡ್ ನಲ್ಲಿ ಭಾಗವಹಿಸಿರುವ ಮೇಘನಾ ಭಾರತದ ಆರನೇ ಮಹಿಳಾ ಫೈಟರ್ ಪೈಲಟ್ ಆಗಿದ್ದಾರಲ್ಲದೆ ದಕ್ಷಿಣ ಭಾರತದ ಪ್ರಪ್ರಥಮ ಮಹಿಳಾ ಫೈಟರ್ ಪೈಲಟ್ ಆಗಿದ್ದಾರೆ.
ಇತರರಿಗಿಂತ ಭಿನ್ನವಾಗಿರಬೇಕೆಂದು ಚಿಕ್ಕಂದಿನಿಂದಲೇ ಬಯಸಿದ್ದ ಮೇಘನಾ ಚಿಕ್ಕಮಗಳೂರಿನ ಮಹರ್ಷಿ ವಿದ್ಯಾ ಮಂದಿರ ಪಬ್ಲಿಕ್ ಸ್ಕೂಲ್ ನಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ತಂದೆಯ ಬಳಿ ತನಗೆ ಮನೆಯ ಆರಾಮದಾಯಕ ವಾತಾವರಣದಿಂದ ಹೊರ ಹಾರಬೇಕೆಂದು ಹೇಳಿದ್ದಳು. ‘‘ಬೋರ್ಡಿಂಗ್ ಸ್ಕೂಲಿನಲ್ಲಿ ಕಲಿಯಬೇಕೆಂದು ನನಗೆ ಮನಸ್ಸಿದೆ ಎಂದು ತಂದೆಯ ಬಳಿ ಹೇಳಿದೆ. ತಾಯಿ ಸ್ವಲ್ಪ ಹಿಂಜರಿದರೂ ತಂದೆ ನನಗೆ ಬೆಂಬಲವಾಗಿ ನಿಂತಿದ್ದರು’’ ಎಂದು 23 ವರ್ಷದ ಈ ದಿಟ್ಟ ಮಹಿಳಾ ಪೈಲಟ್ ಹೇಳುತ್ತಾರೆ. ಚಿಕ್ಕಮಗಳೂರು ಜಿಲ್ಲೆ ಮರ್ಲೆ ಗ್ರಾಮ ಅವರ ಹುಟ್ಟೂರು.
ಆಕೆಯ ಇಚ್ಛೆಯಂತೆಯೇ ಹೆತ್ತವರು ಆಕೆಯನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಗೆ ಕಳುಹಿಸಿದ್ದರು. ಅಲ್ಲಿ ಆಕೆ 5ನೇ ತರಗತಿಯಿಂದ 12ನೇ ತರಗತಿವರೆಗೆ ಕಲಿತರು. ಮುಂದೆ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿದಾಗಲೂ ಜೀವನದಲ್ಲಿ ಇನ್ನಷ್ಟು ಭಿನ್ನವಾಗಿರಲು ಬಯಸಿದ ಆಕೆ ಸಾಹಸ್-ಎಸ್‌ಜೆಸಿಇ ಅಡ್ವೆಂಚರ್ ಕ್ಲಬ್ ಸ್ಥಾಪಿಸಿದ್ದರು. ಇದು ತನ್ನಲ್ಲಿ ಬಹಳಷ್ಟು ಬದಲಾವಣೆ ತಂದಿತ್ತು ಎಂದು ಆಕೆ ಹೇಳುತ್ತಾರೆ.
ಪರೀಕ್ಷೆಯ ರಜಾ ಅವಧಿಗಳಲ್ಲಿ ಟ್ರೆಕ್ಕಿಂಗ್, ರಾಫ್ಟಿಂಗ್, ಪರ್ವತಾರೋಹಣ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ನನ್ನಲ್ಲಿ ಇನ್ನಷ್ಟು ಧೈರ್ಯ ತುಂಬಿಸಿತು. ಪ್ಯಾರಾಗ್ಲೈಡಿಂಗ್ ತರಬೇತಿ ಕೂಡ ಪಡೆದೆ. ನಮ್ಮ ತರಬೇತುದಾರರು ನಿವೃತ್ತ ವಾಯುಸೇನೆಯ ಅಧಿಕಾರಿಗಳಾಗಿದ್ದರಿಂದ ವಾಯುಸೇನೆಯ ಬಗ್ಗೆಯೂ ನಮಗೆ ಅಲ್ಪಸ್ವಲ್ಪ ಮಾಹಿತಿ ದೊರೆಯಿತು. ನಮ್ಮ ತರಬೇತುದಾರರ ಶಿಸ್ತು ಹಾಗು ಜೀವನ ಶೈಲಿ ನನ್ನನ್ನು ಪ್ರಭಾವಿತಗೊಳಿಸಿತು ಎನ್ನುತ್ತಾರೆ ಮೇಘನಾ.
ಆಕೆ ಎರಡನೇ ವರ್ಷ ಇಂಜಿನಿಯರಿಂಗ್ ಕೋರ್ಸ್ ಮಾಡುತ್ತಿದ್ದಾಗ ತನ್ನ ಸೋಲೋ ಪ್ಯಾರಾಗ್ಲೈಡಿಂಗ್ ನಡೆಸಿ ಗೋವಾದ ಖ್ವೆರಿಂ ಬೀಚ್ ನ ಬಂಡೆಯೊಂದರಿಂದ ಹಾರಿದ್ದರು. ಅಲ್ಲಿಂದ ಆಕೆ ವಿಮಾನಗಳತ್ತ ಹೆಚ್ಚು ಆಕರ್ಷಿತರಾದರು.
ಇನ್ಫಾರ್ಮೇಶನ್ ಸಾಯನ್ಸ್ ನಲ್ಲಿ 2015ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ನಂತರ ಉದ್ಯೋಗ ಅರಸುವ ಬದಲು ಏನಾದರೂ ಅಸಾಧಾರಣ ಕಾರ್ಯ ಮಾಡಬೇಕೆಂದು ಯೋಚಿಸುತ್ತಿದ್ದರು. ಇದೇ ಸಮಯ ಭಾರತೀಯ ವಾಯುಸೇನೆ ಫೈಟರ್ ವಿಮಾನಗಳಿಗೆ ಮಹಿಳಾ ಪೈಲಟ್ ಗಳಿಗೆ ಅನುಮತಿ ನೀಡುವುದೆಂಬುದು ದೊಡ್ಡ ಸುದ್ದಿಯಾಗಿತ್ತು. ವಾಯುಸೇನೆಯ ಪ್ರಥಮ ಮಹಿಳಾ ಫೈಟರ್ ಪೈಲಟ್ ಗಳು (ಫ್ಲೈಯಿಂಗ್ ಆಫೀಸರ್ಸ್ ಮೋಹನಾ ಸಿಂಗ್, ಭಾವನಾ ಕಾಂತ್ ಹಾಗೂ ಅವನಿ ಚತುರ್ವೇದಿ) ಜೂನ್ 2016ರಲ್ಲಿ ಏರ್ ಫೋರ್ಸ್ ಫ್ಲೈಯಿಂಗ್ ಅಕಾಡಮಿಯಿಂದ ಶಿಕ್ಷಣ ಪಡೆದು ಹೊರ ಬಂದ ಕಥೆ ಓದಿ ಸ್ಫೂರ್ತಿ ಪಡೆದಿದ್ದರು ಮೇಘನಾ. ನಾನು ಕೂಡ ಅವರಂತೆಯೇ ಆಗಬೇಕೆಂದು ನಿರ್ಧರಿಸಿದೆ ಎಂದು ಹೇಳುವ ಮೇಘನಾ ತಮ್ಮ ತಂದೆ ಹಾಗೂ ಪ್ಯಾರಾಗ್ಲೈಡಿಂಗ್ ಕೋಚ್ ನಾಗೇಂದ್ರ ತಮ್ಮ ಮಾದರಿ ಎಂದರು.
ಮುಂದೆ ಏರ್ ಫೋರ್ಸ್ ಕಾವನ್ ಎಂಟ್ರೆನ್ಸ್ ಟೆಸ್ಟ್ ತೇರ್ಗಡೆ ಹೊಂದಿದ ಆಕೆ ಸರ್ವಿಸಸ್ ಸೆಲೆಕ್ಷನ್ ಬೋರ್ಡ್ ನಲ್ಲಿಯೂ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆಗೊಂಡು ಅಕಾಡಮಿಯಲ್ಲಿ ಜನವರಿ 2017ರಲ್ಲಿ ಫ್ಲೈಟ್ ಕೆಡೆಟ್ ಆಗಿ ಸೇರ್ಪಡೆಗೊಂಡಿದ್ದರು.
ಜೂನ್ 2017ರಲ್ಲಿ ಆಕೆ ತನ್ನ ಶಿಕ್ಷಕರೊಂದಿಗೆ ಪಿಲೇಟಸ್ ಎಂಬ ವಿಮಾನದಲ್ಲಿ ಮೊದಲ ಬಾರಿ ಹಾರಾಟ ನಡೆಸಿದ್ದರು. ಇಲ್ಲಿಯ ತನಕ ಆಕೆ ಪಿಲೇಟಸ್ (ಮೊದಲನೇ ಹಂತ) 50 ವಿಮಾನಗಳನ್ನು ಹಾರಾಟ ನಡೆಸಿದ್ದರೆ ಕಿರಣ್ (ಎರಡನೇ ಹಂತ) 90 ವಿಮಾನಗಳ ಹಾರಾಟ ನಡೆಸಿದ್ದಾರೆ. ಆಕೆ ಏಕಾಂಗಿಯಾಗಿ ಮೊದಲ ಬಾರಿ ಪಿಲಾಟಸ್ ವಿಮಾನವನ್ನು ಆಗಸ್ಟ್ 2017ರಲ್ಲಿ ಹಾರಾಟ ನಡೆಸಿದ್ದರು. ಅದು ನನ್ನ ಜೀವನದ ದೊಡ್ಡ ದಿನವಾಗಿತ್ತು ಆ 20 ನಿಮಿಷಗಳನ್ನು ನಾನು ಮರೆಯಲಾರೆ ಎನ್ನುತ್ತಾರೆ ಮೇಘನಾ.
ಫೈಟರ್ ಪೈಲಟ್ ಆಗ ಬಯಸುವವರು ದೊಡ್ಡ ಕನಸುಗಳನ್ನು ಹೊಂದಬೇಕು. ಇತರರಿಗಿಂತ ಈ ಕನಸು ವಿಭಿನ್ನವಾಗಿರಬೇಕು. ಅದು ಅಸಾಧ್ಯವೆನಿಸಿದರೂ ಅದನ್ನು ಬೆಂಬತ್ತಬೇಕು’’ ಎಂದು ಅವರು ಹೇಳಿದರು. ಕರ್ನಾಟಕ ಸಂಗೀತದಲ್ಲೂ ಆಕೆ ತರಬೇತು ಪಡೆದ ಗಾಯಕಿಯಾಗಿದ್ದಾರೆ. ಇನ್ನೊಂದು ತಿಂಗಳ ಬ್ರೇಕ್ ನಂತರ ಆಕೆ ಬೀದರ್ ನಲ್ಲಿನ ಏರ್ ಫೋರ್ಸ್ ಸ್ಟೇಶನ್ ಗೆ ಹಾಕ್ ವಿಮಾನದಲ್ಲಿ ತನ್ನ ಮುಂದಿನ ಹಂತದ ತರಬೇತಿಗಾಗಿ ತೆರಳಲಿದ್ದಾರೆ.
ತಮ್ಮ ಕುಟುಂಬದ ಹೀರೋ ಆಗಿರುವ ಮೇಘನಾ

ಮೇಘನಾ ಅವರ ತಂದೆ ಎಂ ಕೆ ರಮೇಶ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದರೆ, ತಾಯಿ ಸಿ ವಿ ಶೋಭಾ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶೆ. ಆಕೆಯ ಸೋದರ ನಿರ್ಣಯ್ ಶಾನುಭೋಗ್ ಪದವಿಪೂರ್ವ ಶಿಕ್ಷಣ ಮುಗಿಸಿದ್ದು ಪುಣೆಯ ಸಿಂಬಿಯೋಸಿಸ್ ಇನ್‌ಸ್ಟಿಟ್ಯೂಟ್ ನಲ್ಲಿ ಕಾನೂನು ಶಿಕ್ಷಣ ಪಡೆಯಲು ಸದ್ಯದಲ್ಲಿಯೇ ತೆರಳಲಿದ್ದಾರೆ. ನಿರ್ಣಯ್ ಪಾಲಿಗೆ ಆತನ ಅಕ್ಕನೇ ಹೀರೋ.
ತಮ್ಮ ಮಗಳ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಆಕೆಯ ತಂದೆ, ಆಕೆಯನ್ನು ವಾಯುಸೇನೆಯ ಅಧಿಕಾರಿ ಅಥವಾ ಐಎಎಸ್ ಅಧಿಕಾರಿಯನ್ನಾಗಿಸ ಬಯಸಿದ್ದರು. ಆಕೆ ಅಸಾಮಾನ್ಯ ಸಾಧನೆ ಮಾಡಬೇಕೆಂಬುದೇ ನನ್ನ ಇಚ್ಛೆ ಎಂದು ರಮೇಶ್ ಹೇಳುತ್ತಾರೆ. ತಮ್ಮ ಪೂರ್ವಜರು ಗ್ರಾಮಾಧಿಕಾರಿಗಳಾಗಿದ್ದರಿಂದ ತಮ್ಮ ಕುಟುಂಬಕ್ಕೆ ಶಾನುಭೋಗ್ ಎಂಬ ಉಪನಾಮೆ ದೊರಕಿತ್ತೆಂದು ಅವರು ವಿವರಿಸುತ್ತಾರೆ.
ಇಡೀ ಕುಟುಂಬ ಮೇಘನಾರ ಫ್ಲೈಯಿಂಗ್ ಆಫೀಸರ್ ಗ್ರಾಜುವೇಶನ್ ಕಾರ್ಯಕ್ರಮಕ್ಕೆ ಹಾಜರಾಗಿ ಸಂತೋಷ ಪಟ್ಟಿತು. ವಾಯುಸೇನೆ ಮುಖ್ಯಸ್ಥ ಬಿರೇಂದರ್ ಸಿಂಗ್ ಧನೋವ ಪೆರೇಡ್ ವೀಕ್ಷಿಸಿ ವಿವಿಧ ಅಭ್ಯರ್ಥಿಗಳಿಗೆ ಪ್ರೆಸಿಡೆಂಟ್ಸ್ ಕಮಿಷನ್ ನೀಡಿದರು. ಹೊಸ ಅಧಿಕಾರಿಗಳಿಗೆ ವಿಂಗ್ಸ್ ಆ್ಯಂಡ್ ಬ್ರೆವೆಟ್ಸ್ ಕೂಡ ಅವರು ಹಸ್ತಾಂತರಿಸಿರು. ಚಿಕ್ಕಮಗಳೂರಿನ ದಿಟ್ಟ ಹಾಗೂ ಸಾಹಸಿ ಯುವತಿ ಫ್ಲೈಯಿಂಗ್ ಆಫೀಸರ್ ಮೇಘನಾ ಶಾನುಭೋಗ್ ಅವರಲ್ಲೊಬ್ಬರಾಗಿ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.







