ಪಿಲಿಕುಳದ ಹಣ್ಣುಗಳ ಸಂತೆಯಲ್ಲಿ ‘ಹಲಸಿನದ್ದೇ ಪಾರಮ್ಯ’ !
► ಬಾಯಲ್ಲಿ ನೀರೂರಿಸುತ್ತಿದೆ ಹಲಸಿನ ವಿಭಿನ್ನ ರುಚಿ, ಬಣ್ಣ ► ಅಪರೂಪದ ಕಾಡು ಹಣ್ಣುಗಳೂ ಇಲ್ಲಿವೆ

ಮಂಗಳೂರು, ಜೂ.16: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಅರ್ಬನ್ ಹಾತ್‌ನಲ್ಲಿ ಇಂದು ಉದ್ಘಾಟನೆಗೊಂಡಿರುವ ಹಣ್ಣುಗಳ ಸಂತೆಯಲ್ಲಿ ವಿವಿಧ ತಳಿ, ರುಚಿ ಹಾಗೂ ಬಣ್ಣಗಳಿಂದ ಕೂಡಿದ ಹಲಸಿನ ಹಣ್ಣುಗಳು ಪಾರಮ್ಯ ಮೆರೆದಿವೆ.
ಕಾಡು ಹಣ್ಣಾಗಿ ಬೆಳೆಯುತ್ತಿದ್ದ, ನಮ್ಮ ಸುತ್ತಮುತ್ತ ಹೆಚ್ಚಾಗಿ ಮರದಿಂದ ಬಿದ್ದು, ಹಾಳಾಗಿಯೇ ಹೋಗುತ್ತಿದ್ದ ಹಲಸಿನ ಹಣ್ಣು ಇಂದು ಅಂತಾರಾಷ್ಟ್ರೀಯವಾಗಿ ಪರಿಚಯವಾಗುವುದರೊಂದಿಗೆ ಐಸ್‌ಕ್ರೀಂ ಮೂಲಕವೂ ಹೆಸರು ಪಡೆದಿದೆ. ಎರಡು ದಿನಗಳ ಅವಧಿಯ ಪಿಲಿಕುಳದಲ್ಲಿನ ಹಣ್ಣುಗಳ ಸಂತೆಯಲ್ಲಿ ಕಾಡಿನಲ್ಲಿ ದೊರೆಯುವ ಅಪರೂಪದ ಹಣ್ಣು ಹಂಪಲುಗಳು, ಮಾವು ಹಾಗೂ ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಜತೆಗೆ ಹಲಸಿನ ಹಣ್ಣಿನ ವಿಭಿನ್ನ ತಳಿಗಳು ಹೆಚ್ಚು ಆಕರ್ಷಣೆ ಪಡೆದಿದೆ.
ಶಿವರಾತ್ರಿ, ಏಕಾದಶಿ ಹಲಸೂ ಬೆಳೆಸುತ್ತಾರಿವರು !
ಹಲಸಿನ ಹಣ್ಣಿನಲ್ಲಿ ರುದ್ರಾಕ್ಷಿ, ಚಂದ್ರಹಲಸು ಭಾರೀ ಫೇಮಸ್. ಕಳೆದ ಸುಮಾರು ಎಂಟು ವರ್ಷಗಳಿಂದೀಚೆಗೆ ದೊಡ್ಡಬಳ್ಳಾಪುರದ ತೂಬಗೆರೆ ಹೋಬಳಿ ಹಲಸು ಬೆಳೆಗಾರರ ಸಂಘದಿಂದ ಮಂಗಳೂರಿಗೆ ರುದ್ರಾಕ್ಷಿ, ಚಂದ್ರಹಲಸು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ರವಾನೆಯಾಗುತ್ತಿದೆ. ತೂಬಗೆರೆ ಹಲಸು ಪ್ರಸ್ತುತ ನ್ಯಾಚುರಲ್ ಐಸ್‌ಕ್ರೀಂ ಮೂಲಕವೂ ಹೆಸರು ಪಡೆದಿದೆ. ಈ ತೂಬಗೆರೆ ಹೋಬಳಿಯಲ್ಲಿ ಏಕಾದಶಿ, ಶಿವರಾತ್ರಿ ಹಲಸನ್ನೂ ಬೆಳೆಸಲಾಗುತ್ತಿದೆ. ಶಿವರಾತ್ರಿಗೆ ಒಂದು ತಿಂಗಳ ಮುಂಚಿತವಾಗಿ ಕಾಯಿಬಿಟ್ಟು ಹಣ್ಣಾಗುವ ಹಲಸನ್ನು (ಜನವರಿ ತಿಂಗಳ ವೇಳೆಗೆ) ಶಿವರಾತ್ರಿ ಹಲಸು ಹಾಗೂ ಏಕಾದಶಿಯಲ್ಲಿ ಬಿತ್ತನೆ ಮಾಡಿ ಬೆಳೆಸಲಾಗುವ ಹಲಸನ್ನು ಏಕಾದಶಿ ಹಣ್ಣಾಗಿ ನಾವು ಕರೆಯುತ್ತೇವೆ ಎನ್ನುತ್ತಾರೆ ಸಂಘದ ಅಧ್ಯಕ್ಷ ರವಿ ಕುಮಾರ್.
ಪಿಲಿಕುಳದಲ್ಲಿ ನಡೆಯುವ ಹಣ್ಣಿನ ಮೇಳದಲ್ಲಿ ಈ ಬಾರಿಯೂ ಸುಮಾರು 2 ಟನ್ ಹಲಸಿನ ಹಣ್ಣುಗಳನ್ನು ತೂಬಗೆರೆಯಿಂದ ರವಿ ಕುಮಾರ್ ತಂದು ಪ್ರದರ್ಶನ ಮತ್ತು ಮಾರಾಟದಲ್ಲಿ ಭಾಗವಹಿಸಿದ್ದಾರೆ. ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ ಹಲಸು ಹೆಚ್ಚಿನ ಬೇಡಿಕೆಯನ್ನು ಪಡೆದಿದೆ. ಚಂದ್ರ ಹಲಸೊಂದು 10ರಿಂದ 50 ಕೆಜಿವರೆಗೆ ತೂಗುತ್ತದೆ. ತೂಬಗೆರೆಯಲ್ಲಿ ಸುಮಾರು 3500 ಹಲಸಿನ ಮರಗಳಿದ್ದು, ಇಲ್ಲಿ ಬೆಳೆಯಲಾಗುವ ಹಲಸಿನಲ್ಲಿ ಸುಮಾರು 80ರಿಂದ 100 ಟನ್‌ಗಳನ್ನು (ಮೇ, ಜೂನ್ ತಿಂಗಳಲ್ಲಿ) ಮಂಗಳೂರಿನ ನ್ಯಾಚುರಲ್ ಐಸ್‌ಕ್ರೀಂ ಸಂಸ್ಥೆಗೆ ಮಾರಾಟ ಮಾಡಲಾಗುತ್ತಿದೆ. 2009ರಲ್ಲಿ ಸಂಘ ಸ್ಥಾಪನೆಗೊಂಡಾಗ 4 ಲಕ್ಷ ರೂ.ಗಳಿದ್ದ ವಾರ್ಷಿಕ ವಹಿವಾಟು ಇದೀಗ 28 ಲಕ್ಷ ರೂ.ಗಳಿಗೆ ತಲುಪಿದೆ ಎಂದು ಸಂತಸದಿಂದ ಹೇಳುತ್ತಾರೆ ರವಿ ಕುಮಾರ್.
ಸಾಂಬಾರಿಗೂ ಪ್ರತ್ಯೇಕವಾಗಿ ಹಲಸನ್ನು ಬೆಳೆಸಲಾಗುತ್ತಿದ್ದು, ಈ ವರ್ಷ 80 ಟನ್ ಹಲಸನ್ನು ಸಾಂಬಾರಿಗೆ ರಿಲಾಯನ್ಸ್ ಸಂಸ್ಥೆಗೆ ನೀಡಿರುವುದಾಗಿ ರವಿ ಕುಮಾರ್ ಹೇಳುತ್ತಾರೆ.
ಅಜ್ಜಿ ನೆಟ್ಟ ಮರದಿಂದ ದೇಶ ಸುತ್ತುವ ಭಾಗ್ಯ ದೊರಕಿತು !
ರವಿಕುಮಾರ್ ಅವರ ಅಜ್ಜಿ ನೆಟ್ಟ ಹಲಸಿನ ಮರಕ್ಕೀಗ 95 ವರ್ಷಗಳಂತೆ. ಆ ಮರದ ಹಣ್ಣಿನ ಮೂಲಕ ಹಲಸಿನ ಹಣ್ಣುಗಳ ಸಂಶೋಧನೆ ನಡೆಸಲಾಗಿ, ಉಪ ಉತ್ಪನ್ನಗಳಿಗೆ ಬೇಡಿಕೆಯಾಗಿ ನೀರೇ ಇಲ್ಲದ ಪ್ರದೇಶದಲ್ಲಿ ಇದೀಗ ಸಾವಿರಾರು ಸಂಖ್ಯೆಯಲ್ಲಿ ಹಲಸಿನ ಹಣ್ಣನ್ನು ಬೆಳೆಸಿ ರೈತರಿಗೆ ಹೊಸ ಬದುಕನ್ನು ನೀಡಿದೆ ಎನ್ನುತ್ತಾರೆ ರವಿಕುಮಾರ್.
ಮರದಿಂದ ಬಿದ್ದು ಹಾಳಾಗಿ ಹೋಗುತ್ತಿದ್ದ ಹಲಸಿನ ಹಣ್ಣು ಇದೀಗ ನಾನು ಸೇರಿದಂತೆ ನನ್ನಂತ ಹಲವು ರೈತರಿಗೆ ಬದುಕು ಕೊಟ್ಟಿದೆ. ನಾನು ದೇಶ ಸುತ್ತುವ ಭಾಗ್ಯ ದೊರಕಿದೆ ಎನ್ನುವ ರವಿಕುಮಾರ್ ತೋಟದಲ್ಲಿ 300 ವರ್ಷಗಳ ಹಳೆಯ ಹಲಸಿನ ಮರವೊಂದಿದ್ದು, ಕಳೆದ ವರ್ಷದ ಮಳೆಯ ಸಂದರ್ಭ ಧರಾಶಾಹಿಯಾಗಿದೆ ಎನ್ನುತ್ತಾರೆ.
ಘಮಘಮಿಸುವ ಹಲಸಿನ ಹಣ್ಣಿನ ಹೋಳಿಗೆ !
ಮೂಡುಶೆಡ್ಡೆಯ ಲಕ್ಷ್ಮಿ ಸಿ. ಆಚಾರ್ ಅವರು ತಯಾರಿಸುವ ಹಲಸಿನ ಹಣ್ಣಿನ ಹೋಳಿಗೆ ಪರಿಮಳ ಘಮಮಿಸುತ್ತದೆ. ಕಳೆದ ನಾಲ್ಕು ತಿಂಗಳಿನಿಂದೀಚೆಗೆ ಹಲಸಿನ ಹಣ್ಣಿನ ಹೋಳಿಗೆ ತಯಾರಿಸಲು ಆರಂಭಿಸಿರುವ ಇವರು ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ಹೋಳಿಗೆಯನ್ನು ಮಾಡಿ ಕೊಡುತ್ತಾರೆ. ಮೈಸೂರು ಮೂಲದವರಾದ ಲಕ್ಷ್ಮಿಯವರಿಗೆ ಹೋಳಿಗೆಯನ್ನು ಮನೆಯ ಪ್ರತಿಯೊಂದು ಕಾರ್ಯಕ್ರಮಗಳಿಗೂ ಮಾಡಿ ಅಭ್ಯಾಸವಿದೆ. ಆ ಹೋಳಿಗೆಗೆ ಇದೀಗ ಇವರು ಹಲಸಿನ ಹಣ್ಣನ್ನು ಸೇರಿಸಿ ಹೊಸ ರುಚಿಯ ಖಾದ್ಯವನ್ನು ತಯಾರಿಸುತ್ತಿದ್ದಾರೆ. ದಿನವೊಂದಕ್ಕೆ 1000 ಹೋಳಿಗೆಯನ್ನು ಇವರು ತಯಾರಿಸುತ್ತಾರಂತೆ. ಉತ್ತಮ ಬೇಡಿಕೆ ಇದ್ದು, ಈ ಹೋಳಿಗೆ ಸುಮಾರು ನಾಲ್ಕರಿಂದ ಐದು ದಿನಗಳವರೆಗೆ ಇಡಬಹುದು ಎನ್ನುತ್ತಾರೆ.
ಸಿಂಗಾಪುರ ಪೇರಳೆಯೂ ಇಲ್ಲಿದೆ !
ಪೇರಳೆ ಹಣ್ಣಿನ ವಿವಿಧ ತಳಿ, ರೂಪಗಳನ್ನು ಕೇಳಿರಬಹುದು, ನೋಡಿರಬಹುದು. ಆದರೆ ಸಿಂಗಾಪುರ ಪೇರಳೆ ಹೆಸರು ತೀರಾ ಅಪರೂಪ. ಅಂತಹ ಅಪರೂಪ ಪೇರಳೆ ಹಣ್ಣೂ ಹಣ್ಣುಗಳ ಸಂತೆಯಲ್ಲಿ ವೀಕ್ಷಣೆಗೆ ಲಭ್ಯ. ಮಂಜೇಶ್ವರದ ದೈಗೋಳಿಯಲ್ಲಿ ತಮ್ಮ ತೋಟದಲ್ಲಿ ಸಿಂಗಾಪುರ ಪೇರಳೆಯ ಜತೆಗೆ ಕೆಜಿ ಪೇರಳೆ, ಗೊಂಚಲು ಪೇರಳೆ, ಲಕ್ನೋ ಪೇರಳೆ ಜತೆಗೆ ಉಂಡೆ ಪುಳಿ, ಅಂಬಟೆ, ಕಾನ ಕಲ್ಲಟೆ, ರಾಂಬುಟಾನ್, ಮಂತ್ ಪುಳಿ, ಫ್ಯಾಶನ್ ಫ್ರೂಟ್, ಬಟರ್ ಫ್ರೂಟ್‌ಗಳನ್ನು ಬೆಳೆುುತ್ತಾರೆ ರವಿಶಂಕರ್ ಸುನ್ನಂಗೊಳಿ.
ಹಲಸಿನ ಬನ್ಸ್, ಮಂಚೂರಿ !
ರಾಸಾಯನಿಕ ರಹಿತ ಸಿದ್ಧ ತಿನಿಸುಗಳ ಮಳಿಗೆಯಲ್ಲಿ ರುಚಿಕರ ಹಲಸಿನ ಬನ್ಸ್ ಹಾಗೂ ಮಂಚೂರಿ ಲಭ್ಯ. ಸ್ಥಳದಲ್ಲೇ ಬಿಸಿ ಬಿಸಿಯಾಗಿ ಬನ್ಸ್ ಹಾಗೂ ಮಂಚೂರಿಯನ್ನು ತಯಾರಿಸಿ ನೀಡಲಾಗುತ್ತದೆ. ಹಣ್ಣುಗಳ ಸಂತೆಯ ವಿವಿಧ ಮಳಿಗೆಗಳಲ್ಲಿ ವಿವಿಧ ಜಾತಿಯ ಹಣ್ಣುಹಂಪಲುಳ ಸಸಿಗಳೂ ಮಾರಾಟಕ್ಕೆ ಲಭ್ಯವಿದೆ.
ಸಂತೋಷ್ ಭಂಡಾರ್‌ಕಾರ್‌ರವರ ಹಲಸಿನ ಬೀಜದ ವಡೆ, ಗಟ್ಟಿ ಗಮನ ಸೆಳೆಯುತ್ತಿದ್ದರೆ, ಮುಲ್ಕಿ ಕರ್ನಿರೆಯ ಗಣೇಶ್ ಪ್ರಭು ಅವರ ಮಳಿಗೆಯಲ್ಲಿ ಪೆಜಕಾಯಿ, ಮಾವಿನ ಕಾಯಿ ಬೇಯಿಸಿ ಉಪ್ಪು ನೀರಿಲ್ಲಿ ಹಾಕಿರುವ ಪದಾರ್ಥಗಳು ಲಭ್ಯ.
ಹಲಸು ಕತ್ತರಿಸಿ ಹಣ್ಣುಗಳ ಸಂತೆಗೆ ಚಾಲನೆ
ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜಾ ಹಾಗೂ ಶಾಸಕ ಉಮಾನಾಥ ಕೋಟ್ಯಾನ್‌ರವರು ಹಲಸಿನ ಹಣ್ಣನ್ನು ಕತ್ತರಿಸುವ ಮೂಲಕ ಎರಡು ದಿನಗಳ ಹಣ್ಣುಗಳ ಸಂತೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಹಲಸಿನ ಹಣ್ಣಿನ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ನಡೆದು, ಬೇಡಿಕೆ ಹೆಚ್ಚಿಸಬೇಕಾಗಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಈ ರೀತಿಯ ಮೇಳಗಳಿಂದ ಹಲಸು ಸೇರಿದಂತೆ ವಿವಿಧ ರೀತಿಯ ಹಣ್ಣು ಹಂಪಲುಗಳನ್ನು ಬೆಳೆಸುವವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಿಲಿಕುಳದ ವಿಜ್ಞಾನ ಕೇಂದ್ರದ ಡಾ.ಕೆ.ವಿ. ರಾವ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್, ಪಿಲಿಕುಳ ನಿಸರ್ಗಧಾಮದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಡಿ.ಕೆ. ಚೌಟ, ಕಾರ್ಪೊರೇಟರ್ ಹೇಮಲತಾ ರಘುರಾಮ್, ತಾ.ಪಂ. ಸದಸ್ಯೆ ಕವಿತಾ, ಗ್ರಾ.ಪಂ. ಸದಸ್ಯರಾದ ಪೂರ್ಣಿಮಾ, ವಸಂತಿ, ಮೋಹಿನಿ, ವೇದಾವತಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರಿಗೆ ಹೊಸ ಪರಿಚಯ ಗ್ಯಾಕ್‌ಫ್ರೂಟ್ !
ಸದ್ಯ ಮಂಗಳೂರು ಮಾರುಕಟ್ಟೆಯಲ್ಲೆಲ್ಲೂ ಲಭ್ಯವಾಗದ ಗ್ಯಾಕ್ ಫ್ರೂಟ್ ಹಣ್ಣುಗಳ ಸಂತೆಯಲ್ಲಿ ಕಾಣಬಹುದು. ಅವಕಾಡೊ ರೀತಿಯ ಸೌಮ್ಯ ರುಚಿಯನ್ನು ಹೊಂದಿರುವ ಈ ಹಣ್ಣನ್ನು ಜ್ಯೂಸ್‌ಗಾಗಿ ಬಳಸಲಾಗುತ್ತದೆ. ಮೂಡಬಿದ್ರೆಯ ಬೆಳುವಾಯಿಯ ಉದಯ ಕುಮಾರ್ ಅವರು ಬೆಳೆದಿರುವ ಬಳ್ಳಿಯಲ್ಲಿ ಈ ಹಣ್ಣು ಇದೇ ಮೊದಲ ಬಾರಿಗೆ ಇಳುವರಿಯನ್ನು ನೀಡಿದೆ. ನೇಪಾಳದಲ್ಲಿ ಝೂಸ್ ಕರೇಲಾ ಎಂದು ಕರೆಯುವ ಈ ಹಣ್ಣು ಆಗ್ನೇಯ ಏಷ್ಯಾದ ಮೂಲಕ ಈಶಾನ್ಯ ಆಸ್ಟ್ರೇಲಿಯಾಕ್ಕೆ, ಬಳಿಕ ದಕ್ಷಿಣ ಚೀನಾದ ಮೂಲಕ ಇದೀಗ ಮಂಗಳೂರಿನಲ್ಲಿಯೂ ಲಭ್ಯವಾಗಿದೆ. ಮಲೇಷಿಯಾದಲ್ಲಿ ಇದನ್ನು ಟೆರುವಾ ಎಂದು ಕರೆಯಲಾಗುತ್ತಿದ್ದು, ಅತೀ ಹೆಚ್ಚು ಕಾರ್ಬೊಹೈಡ್ರೇಟ್‌ನಿಂದ ಕೂಡಿದ ಈ ಹಣ್ಣು ನೋಡಲು ಮಾತ್ರ ಅಪರೂಪಲ್ಲ, ರುಚಿಯಲ್ಲೂ ಅಪರೂಪ ಎನ್ನುತ್ತಾರೆ ಉದಯ ಕುಮಾರ್.








