ಪ್ರಧಾನಿಗೆ ತಮ್ಮ ಆಶ್ವಾಸನೆ ನೆನಪಿಸಲು ಪಾದಯಾತ್ರೆ ಕೈಗೊಂಡ ಒಡಿಶಾ ಯುವಕ

ಚಿತ್ರ ಕೃಪೆ: ಎಎನ್ಐ
ಆಗ್ರಾ, ಜೂ. 16: ಒಡಿಶಾದ ರೂರ್ಕೆಲಾದ ಮೂರ್ತಿ ತಯಾರಕ ಮುಕ್ತಿಕಂಠ ಬಿಸ್ವಾಲ್ ಎಪ್ರಿಲ್ ತಿಂಗಳಲ್ಲಿ ತನ್ನ ಊರಿನಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದರು.
ತನ್ನ ಊರಿನಲ್ಲಿ ಲಭ್ಯವಾಗುವ ಆರೋಗ್ಯ ಸೇವೆಗಳನ್ನು ಸುಧಾರಿಸಲು, ಮುಖ್ಯವಾಗಿ ಅಲ್ಲಿನ ಇಸ್ಪಾತ್ ಜನರಲ್ ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಆಶ್ವಾಸನೆ ಈಡೇರಿಲ್ಲವೆಂಬ ವಿಚಾರದ ಬಗ್ಗೆ ಅವರ ಗಮನ ಸೆಳೆಯಲು ಮೂವತ್ತು ವರ್ಷದ ಈ ಯುವಕ ಈ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಆದರೆ 1,350 ಕಿಮೀ ದೂರ ತಲುಪುವುದರೊಳಗಾಗಿ ಆತ ಇತ್ತೀಚೆಗೆ ಪ್ರಜ್ಞೆ ತಪ್ಪಿ ಬಿದ್ದು ಆಗ್ರಾದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ತನ್ನ ಆರೋಗ್ಯ ಸುಧಾರಿಸಿದ ಕೂಡಲೇ ಮತ್ತೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲು ದೆಹಲಿಗೆ ನಡೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ತನ್ನ ಗ್ರಾಮದಲ್ಲಿ ಸರಿಯಾದ ಆರೋಗ್ಯ ಸೇವಾ ಸೌಲಭ್ಯಗಳಿಲ್ಲದೆ ಪ್ರತಿ ದಿನ ಜನ ಸಾಯುತ್ತಿದ್ದಾರೆ ಎಂದು ಅಲವತ್ತುಕೊಳ್ಳುತ್ತಾರೆ.
2015ರಲ್ಲಿ ತನ್ನ ಊರಿಗೆ ಬಂದಿದ್ದ ಪ್ರಧಾನಿ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದ್ದರಲ್ಲದೆ ರೂರ್ಕೆಲಾದ ಬ್ರಾಹ್ಮಣಿ ಸೇತುವೆಯನ್ನು ಪೂರ್ಣಗೊಳಿಸುವ ಹಾಗೂ ಇಸ್ಪಾತ್ ಆಸ್ಪತೆಯನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನಾಗಿಸುವ ಆಶ್ವಾಸನೆ ನೀಡಿದ್ದರು ಎಂದು ಬಿಸ್ವಾಲ್ ಹೇಳುತ್ತಾರೆ.
ಅಷ್ಟಕ್ಕೂ ಇಷ್ಟೊಂದು ಕಷ್ಟಕರ ಯಾತ್ರೆ ಕೈಗೊಳ್ಳಲು ಪ್ರೇರಣೆಯೇನೆಂದು ಕೇಳಿದರೆ ಆತನ ಉತ್ತರ ‘ರಾಷ್ಟ್ರಧ್ವಜ’ ಎಂಬುದಾಗಿದೆ.







