ವಾಟ್ಸ್ಯಾಪ್ ಮೂಲಕ ಕಳುಹಿಸಲಾದ ಲಾಯರ್ ನೋಟಿಸ್ ಕಾನೂನುಬದ್ಧ : ಬಾಂಬೆ ಹೈಕೋರ್ಟ್

ಮುಂಬೈ,ಜೂ.16 : ಲಾಯರ್ ನೋಟಿಸ್ ಒಂದನ್ನು ವಾಟ್ಸ್ಯಾಪ್ ಮೂಲಕ ಕಳುಹಿಸುವುದು ಕಾನೂನುಬದ್ಧವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಕ್ರೆಡಿಟ್ ಕಾರ್ಡ್ ಹಣ ಪಾವತಿ ಮಾಡದ ವ್ಯಕ್ತಿಯೊಬ್ಬ ಬಾಕಿ ಪಾವತಿಸುವುದನ್ನು ತಪ್ಪಿಸುತ್ತಿದ್ದನಲ್ಲದೆ ಆತನಿಗೆ ಪಿಡಿಎಫ್ ಫೈಲ್ ಮುಖಾಂತರ ವಾಟ್ಸ್ಯಾಪ್ ಮೂಲಕ ಕಳುಹಿಸಲಾದ ನೋಟಿಸ್ ಅನ್ನು ಆತ ಓದಿದ್ದಾನೆ ಎಂದೂ ಜಸ್ಟಿಸ್ ಗೌತಮ್ ಪಟೇಲ್ ಹೇಳಿದ್ದಾರೆ.
ಎಸ್‍ಬಿಐ ಕಾಡ್ರ್ಸ್ ಎಂಡ್ ಪೇಮೆಂಟ್ ಸರ್ವಿಸ್ ನಲಸೊಪಾರ ನಿವಾಸಿ ರೋಹಿದಾಸ್ ಜಾಧವ್ ವಿರುದ್ಧ ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿತ್ತು. ಜಾಧವ್ ಬ್ಯಾಂಕಿಗೆ ರೂ. 1.17 ಲಕ್ಷ ಪಾವತಿಸಬೇಕಿತ್ತು.
ಜಾಧವ್ ತನಗೆ ವಾಟ್ಸ್ಯಾಪ್ ಮೂಲಕ ಕಳುಹಿಸಲಾಗಿದ್ದ ನೋಟಿಸ್ ಅನ್ನು ತೆರೆದು ಓದಿದ್ದಾನೆಂಬುದನ್ನು ಐಕಾನ್ ಇಂಡಿಕೇಟರ್ಸ್ ಸೂಚಿಸಿದೆ ಎಂಬುದನ್ನೂ ಜಸ್ಟಿಸ್ ಪಟೇಲ್ ಗಣನೆಗೆ ತೆಗೆದುಕೊಂಡಿದ್ದಾರೆ.
ಆರೋಪಿ ಜಾಧವ್ ತನ್ನ ನಿವಾಸ ಬದಲಿಸಿದ್ದರಿಂದ ಹಾಗೂ ಸಂಸ್ಥೆಯ ಬಳಿ ಆತನ ಫೋನ್ ನಂಬರ್ ಇದ್ದುದರಿಂದ ಆತನನ್ನು ಸಂಪರ್ಕಿಸುವ ವಿಧಾನ ಇದೊಂದೇ ಆಗಿತ್ತು ಎಂದು ಬ್ಯಾಂಕಿನ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದ್ದರು.
ಜಾಧವ್ ಕ್ರೆಡಿಟ್ ಕಾರ್ಡ್ ಮೂಲಕ 2010ರಲ್ಲಿ ರೂ. 85,000ರ ತನಕ ಖರ್ಚು ಮಾಡಿದ್ದ. 2011ರಲ್ಲಿ ತನಿಖೆಯ ನಂತರ ಶೇ. 8ರ ಬಡ್ಡಿಯಂತೆ ಹಣವನ್ನು ಹಿಂದಿರುಗಿಸುವಂತೆ ಆತನಿಗೆ ಆದೇಶಿಸಲಾಗಿತ್ತು. ಆದರೆ ಆತ ಹಣಪಾವತಿ ಮಾಡಲು ವಿಫಲನಾದಾಗ ಬ್ಯಾಂಕು ನ್ಯಾಯಾಲಯದ ಮೊರೆ ಹೋಗಿತ್ತು. ಕಳೆದೆರಡು ವರ್ಷಗಳಿಂದ ಆತನನ್ನು ಸಂಪರ್ಕಿಸಲು ಬ್ಯಾಂಕು ಸತತವಾಗಿ ಪ್ರಯತ್ನಿಸುತ್ತಿದ್ದರೂ ಆತ ತನ್ನ ನಿವಾಸ ಬದಲಿಸುತ್ತಲೇ ಇದ್ದ.







