ಏರ್ ಇಂಡಿಯಾದ ಪೈಲಟ್, ಕ್ಯಾಬಿನ್ ಸಿಬ್ಬಂದಿಗೆ ಕೇವಲ ಶೇ. 20ರಷ್ಟು ವೇತನ ಪಾವತಿ

ಹೊಸದಿಲ್ಲಿ,ಜೂ.16 : ಹೆಚ್ಚಿನ ಏರ್ ಇಂಡಿಯಾ ಉದ್ಯೋಗಿಗಳಿಗೆ ಮೇ ತಿಂಗಳ ವೇತನ ಮಂಗಳವಾರದಂದೇ ದೊರೆತಿದ್ದರೆ ಸಂಸ್ಥೆಯ ಪೈಲಟ್ ಗಳು ಹಾಗೂ ಕ್ಯಾಬಿನ್ ಸಿಬ್ಬಂದಿ ತಮಗೆ ತಮ್ಮ ವೇತನದ ಶೇ. 20ರಷ್ಟು ಹಣ ಮಾತ್ರ ನೀಡಲಾಗಿದೆ ಎಂದು ದೂರಿದ್ದಾರೆ. ತಮ್ಮ ವೇತನದ ಶೇ 80ರಷ್ಟು ಭಾಗ ಹಾರಾಟ ಭತ್ತೆಯಾಗಿದ್ದು ಅದನ್ನು ಇನ್ನಷ್ಟೇ ಪಾವತಿಸಬೇಕಾಗಿದೆ ಎಂದು ಅವರು ಹೇಳುತ್ತಿದ್ಧಾರೆ. ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಶನ್ ಏರ್ ಇಂಡಿಯಾ ಆಡಳಿತ ಮಂಡಳಿಯನ್ನು ಭೇಟಿಯಾಗಲು ನಿರ್ಧರಿಸಿದೆ. ಆದರೆ ಬಾಕಿ ವೇತನ ಯಾವಾಗ ಪಾವತಿ ಮಾಡಲಾಗುವುದೆಂಬುದರ ಬಗ್ಗೆ ತಮಗೆ ಇನ್ನೂ ಮಾಹಿತಿಯಿಲ್ಲ ಎಂದು ಸಂಘಟನೆ ಹೇಳಿಕೊಂಡಿದೆ.
ಇತರ ಉದ್ಯೋಗಿಗಳು ತಮ್ಮ ಪೂರ್ಣ ವೇತನ ಪಡೆದಿದ್ದರೂ 3,000 ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಗೆ ಕೇವಲ ಮೂಲವೇತನ ದೊರೆತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿದ್ದಂತೆಯೇ ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಯ ವೇತನ ಜೂನ್ 15ರೊಳಗಾಗಿ ಅವರ ಖಾತೆಗಳಿಗೆ ಜಮೆಯಾಗಲಿದೆ ಎಂದು ಹೇಳಲಾಗಿತ್ತು. ಕ್ಯಾಬಿನ್ ಸಿಬ್ಬಂದಿ ಮತ್ತು ಪೈಲಟ್ ಗಳಿಗೆ ಹಾರಾಟ ಭತ್ತೆ ನೀಡುವುದು ಕಳೆದೊಂದು ವರ್ಷದಿಂದ ವಿಳಂಬವಾಗುತ್ತಿರುವ ಬಗ್ಗೆ ಕಮಿರ್ಷಿಯಲ್ ಪೈಲಟ್ಸ್ ಅಸೋಸಿಯೇಣ್ ಈಗಾಗಲೇ ವಿಮಾನಯಾನ ನಿರ್ದೇಶನಾಲಯ ಹಾಗೂ ಇಂಡಿಯನ್ ಏರ್ ಲೈನ್ಸ್ ಆಡಳಿತ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಅವರಿಗೆ ಪತ್ರ ಬರೆದಿದೆ.
ಈ ಬಾರಿಯ ವೇತನ ವಿಳಂಬದಿಂದಾಗಿ ಕಳೆದ ನಾಲ್ಕು ತಿಂಗಳುಗಳಿಂದ ಸತತ ವೇತನ ವಿಳಂಬವಾದಂತಾಗಿದೆ ಎಂದು ಕರೋಲ ಅವರಿಗೆ ಜೂನ್ 9ರಂದು ಬರೆದ ಮತ್ತೊಂದು ಪತ್ರದಲ್ಲಿ ಸಂಘಟನೆ ಹೇಳಿದೆ.







