'ಆಯುರ್ವೇದ ಸಂಶೋಧನೆಗೆ 10 ದೇಶಗಳೊಂದಿಗೆ ಒಪ್ಪಂದ'
ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್

ಉಡುಪಿ, ಜೂ.16: ಕೇಂದ್ರ ಸರಕಾರ ಆಯುರ್ವೇದ, ಯೋಗಕ್ಕೆ ವಿಶೇಷ ಆದ್ಯತೆಯನ್ನು ನೀಡುತಿದ್ದು, ಇದಕ್ಕಾಗಿ 10 ದೇಶಗಳೊಂದಿಗೆ ಸಂಶೋಧನೆ, ಜ್ಞಾನ ವಿಸ್ತರಣೆಗೆ ಸಂಬಂಧಿಸಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ನಾಯಕ್ ಹೇಳಿದ್ದಾರೆ.
ಕುಂಜಿಬೆಟ್ಟಿನ ಗೋಸ್ವಾಲ್ ಇನ್‌ಸ್ಟಿಟ್ಯೂಟ್ ಆಫ್ ವೇದಿಕ್ ಎಜುಕೇಶನ್ (ಗಿವ್)ಆಶ್ರಯದಲ್ಲಿ ಪೇಜಾವರ ಮಠದ ಶ್ರೀ ರಾಮವಿಠ್ಠಲ ಸಭಾಂಗಣದಲ್ಲಿ ಶನಿವಾರ ಪ್ರಾರಂಭಗೊಂಡ ಆಯುರ್ವೇದ ಚಿಕಿತ್ಸೆ ‘ಕಾಸ್ಮೊಥೆರಪಿ’ ಕುರಿತ ಮೂರು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
28 ದೇಶಗಳ ರಾಯಭಾರ ಕಚೇರಿಗಳ ಮೂಲಕ ಆಯುಷ್ (ಆಯುರ್ವೇದ, ಯೋಗ, ಯುನಾನಿ) ಕುರಿತಂತೆ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ಮೋದಿ ಭಾರತೀಯ ಯೋಗವನ್ನು ವಿಶ್ವಸಂಸ್ಥೆ ಮೂಲಕ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ತಲುಪುವಂತೆ ಮಾಡಿದ್ದಾರೆ ಎಂದರು.
ಸಾವಿರಾರು ವರ್ಷಗಳ ಕಾಲ ದಾಳಿಕೋರರು ಭಾರತದ ಸಂಪತ್ತನ್ನು ಲೂಟಿ ಮಾಡುವ ಜೊತೆಗೆ ಭಾರತೀಯ ಶಿಕ್ಷಣ, ಸಂಸ್ಕೃತಿ ವ್ಯವಸ್ಥೆಯ ಅಧಃಪತನಕ್ಕೆ ಯತ್ನಿಸಿದ್ದರು. ಆದರೂ ಆಯುರ್ವೇದ, ಯೋಗ ಈಗ ಪುನರುತ್ಥಾನದ ಹಾದಿಯಲ್ಲಿದೆ. ಆಯುರ್ವೇದ, ಜ್ಯೋತಿಷ್ಯ, ಯೋಗ ಜ್ಞಾನ ವಿಸ್ತರಣೆ ಜೊತೆಗೆ ಸಮಾಜದ ಸ್ವಾಸ್ಥಕ್ಕೆ ಕೊಡುಗೆಯನ್ನು ನೀಡಬೇಕು ಎಂದು ನಾಯಕ್ ನುಡಿದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಆಶೀರ್ವಚನ ನೀಡಿ, ವೇದ, ಉಪನಿಷತ್ತು (ತತ್ವಜ್ಞಾನ), ಯೋಗ, ಆಯುರ್ವೇದ, ಕಲಾವೈವಿಧ್ಯತೆ ಜಗತ್ತಿಗೆ ಭಾರತ ನೀಡಿದ ಪಂಚ ಕೊಡುಗೆಗಳಾವೆ ಎಂದರು. ಪತಂಜಲಿ ಮಹರ್ಷಿ, ವ್ಯಾಕರಣ, ಆಯುರ್ವೇದ, ಯೋಗದ ಮೂಲಕ ಭಾಷಾ ಶುದ್ಧಿ, ಮನಸ್ಸು ಮತ್ತು ಶಾರೀರ ಶುದ್ಧಿ ಜತೆಗೆ ನಿರ್ಮಲ ಹೃದಯ ನಿರ್ಮಾಣಕ್ಕೆ ಕೊಡುಗೆ ನೀಡಿದ ವಿಜ್ಞಾನಿಯಾಗಿದ್ದಾರೆ. ನಿಧಾನ ಗುಣವುಳ್ಳ ಆಯುರ್ವೇದದ ಮಹತ್ವವನ್ನು ಈಗ ಜನತೆ ಅರಿಯುತ್ತಿದ್ದು, ಇದೀಗ ಆಯುರ್ವೇದಕ್ಕೆ ಶರಣಾಗುತ್ತಿದ್ದಾರೆ ಎಂದರು.
ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀ ಆಶೀರ್ವಚನ ನೀಡಿದರು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ, ಉದ್ಯಮಿ ಮನೋಹರ ಶೆಟ್ಟಿ ಮಾತನಾಡಿದರು.
ಮಣಿಪಾಲ ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಕೆ. ನಯನಾಭಿರಾಮ ಉಡುಪ, ಮುನಿಯಾಲು ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಟ್ರಸ್ಟಿ ಹೇಮಲತಾ ವಿ. ಶೆಟ್ಟಿ, ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಶ್ರೀನಿವಾಸ ಆಚಾರ್ಯ, ಕಾರ್ಪೊರೇಷನ್ ಬ್ಯಾಂಕ್ ಹಿರಿಯಡ್ಕ ಶಾಖಾ ಪ್ರಬಂಧಕ ವೆಂಕಟೇಶ್ ಕಾಮತ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ, ಗಿವ್ ನಿರ್ದೇಶಕ ಡಾ.ತನ್ಮಯ ಗೋಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರೆ, ಬಾಲಚಂದ್ರ ವಂದಿಸಿದರು. ಸೌಮ್ಯಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.







