ತೃತೀಯ ರಂಗದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಆಪ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಸಮರ
ಸಿಎಂ ಕುಮಾರಸ್ವಾಮಿ ಸಹಿತ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳಿಂದ ಭೇಟಿ, ಬೆಂಬಲ ಘೋಷಣೆ

ಹೊಸದಿಲ್ಲಿ, ಜೂ.16: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮಧ್ಯೆ ನಡೆಯುತ್ತಿರುವ ಸಮರವು ಶನಿವಾರದಂದು ತೃತೀಯ ರಂಗದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಪರಸ್ಪರ ಒಗ್ಗಟ್ಟು ಪ್ರದರ್ಶಿಸಿದ ನಾಲ್ಕು ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಾದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಮತ್ತು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ಕುಮಾಸ್ವಾಮಿ ಹಾಗೂ ಎಡಪಂಥೀಯ ನಾಯಕರು ಕೇಜ್ರಿವಾಲ್‌ಗೆ ತಮ್ಮ ಬೆಂಬಲವನ್ನು ಸೂಚಿಸಿದರು. ಬೈಜಾಲ್‌ಗೆ ಪತ್ರವನ್ನು ಬರೆದಿರುವ ಈ ನಾಯಕರು ಸೋಮವಾರದಂದು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಅನುಮತಿ ನೀಡುವಂತೆ ಕೋರಿದ್ದಾರೆ. ಸದ್ಯ ಅನಿಲ್ ಬೈಜಾಲ್ ನಿವಾಸದಲ್ಲಿ ಧರಣಿ ನಿರತರಾಗಿರುವ ಅರವಿಂದ್ ಕೇಜ್ರಿವಾಲ್‌ರನ್ನು ಭೇಟಿಯಾಗಲು ಮಮತಾ ಬ್ಯಾನರ್ಜಿಗೆ ಅನುಮತಿ ನಿರಾಕರಿಸಿದ ನಂತರ ಅವರು ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಜೊತೆ ಮಾತುಕತೆ ನಡೆಸಿದ್ದಾರೆ.
ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಬೆಂಬಲವನ್ನು ಪಡೆಯುವ ಮೂಲಕ ಹೊಸ ಹುಮ್ಮಸ್ಸನ್ನು ಪಡೆದಿರುವ ಕೇಜ್ರಿವಾಲ್, ಇಂಥ ನಿರ್ಧಾರವನ್ನು ಲೆಫ್ಟಿನೆಂಟ್ ಗವರ್ನರ್ ಏಕಾಂಗಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಖಂಡಿತವಾಗಿಯೂ ನನ್ನನ್ನು ಯಾರೂ ಭೇಟಿಯಾಗಬಾರದು ಎಂದು ಪ್ರಧಾನ ಮಂತ್ರಿಗಳ ಕಚೇರಿಯಿಂದಲೇ ಆದೇಶ ಬಂದಿರಬಹುದು ಎಂದು ಟ್ವೀಟ್ ಮಾಡಿದ್ದಾರೆ. ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಇತರ ರಾಜ್ಯದ ಮುಖ್ಯಮಂತ್ರಿಗಳು ಭೇಟಿಯಾಗದಂತೆ ತಡೆಯುವ ಅಧಿಕಾರ ಪ್ರಧಾನಿಗಿದೆಯೇ? ನಾವು ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿದ್ದೇವೆ. ರಾಜ ನಿವಾಸ ಯಾರ ಸೊತ್ತೂ ಅಲ್ಲ. ಅದು ಭಾರತದ ಜನರಿಗೆ ಸೇರಿದ್ದು ಎಂದು ಕೇಜ್ರಿವಾಲ್ ಇನ್ನೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ದಿಲ್ಲಿಯ ಆಂಧ್ರ ಭವನದಲ್ಲಿ ಸಭೆ ಸೇರಿದ ನಾಲ್ಕು ಮುಖ್ಯಮಂತ್ರಿಗಳು ಶನಿವಾರ ಸಂಜೆ ಸುನೀತಾ ಕೇಜ್ರಿವಾಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ದಿಲ್ಲಿಯಲ್ಲಿ ನಡೆಯುತ್ತಿರುವ ಐಎಎಸ್ ಅಧಿಕಾರಿಗಳ ಧರಣಿಯಲ್ಲಿ ಮಧ್ಯಪ್ರವೇಶಿಸಬೇಕೆಂದು ಕೋರಿ ಅರವಿಂದ್ ಕೇಜ್ರಿವಾಲ್ ಕಳೆದ ಸೋಮವಾರದಿಂದ ಲೆಫ್ಟಿನೆಂಟ್ ಅನಿಲ್ ಬೈಜಾಲ್ ನಿವಾಸದಲ್ಲಿ ಆಪ್‌ನ ಇತರ ನಾಯಕರ ಜೊತೆ ಧರಣಿ ನಡೆಸುತ್ತಿದ್ದಾರೆ.







