ಚುನಾವಣಾ ಲಾಭಕ್ಕಾಗಿ ಧರ್ಮದ ಬಳಕೆ: ಸುಪ್ರೀಂನಿಂದ ರಾಜಕೀಯ ಪಕ್ಷಗಳ ವಿರುದ್ಧದ ಅರ್ಜಿಯ ವಿಚಾರಣೆ

ಹೊಸದಿಲ್ಲಿ, ಮೇ 16: ಚುನಾವಣಾ ಲಾಭಕ್ಕಾಗಿ ಧರ್ಮವನ್ನು ಬಳಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕೋರಿ ಶನಿವಾರ ಹಾಕಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಜುಲೈ ನಾಲ್ಕರಂದು ವಿಚಾರಣೆ ನಡೆಸಲಿದೆ.
ಸರ್ವೋಚ್ಚ ನ್ಯಾಯಾಲಯದ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ್ ಈ ಪಿಐಎಲ್ ಸಲ್ಲಿಸಿದ್ದು, ಭಾರತೀಯ ಚುನಾವಣಾ ಆಯೋಗ ತನ್ನ ಚುನಾವಣಾ ಸುಧಾರಣೆಯಲ್ಲಿ ಪ್ರಸ್ತಾವ ಮಾಡಿರುವಂತೆ ಚುನಾವಣಾ ಲಾಭಕ್ಕಾಗಿ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಕೇಂದ್ರ ಸರಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡುವಂತೆ ಮನವಿ ಮಾಡಿದ್ದಾರೆ. ಚುನಾವಣಾ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವ ವಿದ್ಯಾಮಾನಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಹಾಗೂ ಇದರಿಂದಾಗಿ ದೇಶದ ಜಾತ್ಯತೀತತೆ, ಒಗ್ಗಟ್ಟು ಹಾಗೂ ಏಕತೆಯ ಮೇಲೆ ಪರಿಣಾಮ ಬೀರುವುದರಿಂದ ಸರ್ವೋಚ್ಚ ನ್ಯಾಯಾಲಯವು ಮಧ್ಯಪ್ರವೇಶಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡುವುದಾಗಿ ಉಪಾಧ್ಯಾಯ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಚುನಾವಣಾ ಸುಧಾರಣೆಗಾಗಿ ರಚಿಸಲಾದ ಗೋಸ್ವಾಮಿ ಸಮಿತಿಯ ಶಿಫಾರಸಿನಂತೆ ಭ್ರಷ್ಟ ಪದ್ಧತಿ ಹಾಗೂ ಧರ್ಮದ ದುರುಪಯೋಗಕ್ಕೆ ಸಂಬಂಧಿಸಿದ ದೂರುಗಳನ್ನು ತನಿಖಾ ತಂಡಗಳಿಗೆ ಒಪ್ಪಿಸುವ ಅಧಿಕಾರಿವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು 127 ಪುಟಗಳ ಉಪಾಧ್ಯಾಯ್ ಅವರ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.





