ಅಪಹೃತ ಯೋಧನನ್ನು ಉಗ್ರರು ವಿಚಾರಣೆ ನಡೆಸುತ್ತಿರುವ ವೀಡಿಯೊ ಬಿಡುಗಡೆ

ಶ್ರೀನಗರ, ಜೂ. 16: ಹತ್ಯೆ ನಡೆಸುವ ಮುನ್ನ ಸೇನಾ ಯೋಧ ಔರಂಗಜೇಬ್‌ನನ್ನು ಶಂಕಿತ ಉಗ್ರರು ವಿಚಾರಣೆ ನಡೆಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.
ಯೋಧ ಔರಂಗಜೇಬ್ ಅವರ ಗುಂಡಿನಿಂದ ಛಿದ್ರಗೊಂಡಿದ್ದ ದೇಹ ಗುರುವಾರ ಪತ್ತೆಯಾಗಿತ್ತು. ಉಗ್ರರು ಔರಂಗಜೇಬ್ ಅವರನ್ನು ಹತ್ಯೆಗೈಯುವ ಮುನ್ನ ಈ ವೀಡಿಯೊ ದಾಖಲಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
1.5 ನಿಮಿಷದ ವೀಡಿಯೊವನ್ನು ಅರಣ್ಯ ಪ್ರದೇಶದಲ್ಲಿ ಶೂಟ್ ಮಾಡಲಾಗಿದೆ. ಯೋಧ ಔರಂಗಜೇಬ್ ನೀಲಿ ಬಣ್ಣದ ಜೀನ್ಸ್ ಹಾಗೂ ಟಿ ಶರ್ಟ್ ಧರಿಸಿದ್ದಾರೆ. ಅವರನ್ನು ಕರ್ತವ್ಯ, ನಿಯೋಜನೆ ಹಾಗೂ ಭಾಗಿಯಾಗಿರುವ ಎನ್‌ಕೌಂಟರ್ ಬಗ್ಗೆ ಹಿಜ್ಬುಲ್ ಮುಜಾಹಿದ್ದೀನ್‌ನ ಶಂಕಿತ ಉಗ್ರರು ವಿಚಾರಣೆ ನಡೆಸುತ್ತಿರುವುದು ವೀಡಿಯೊದಲ್ಲಿ ಇದೆ ಎಂದು ಸೇನಾ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಔರಂಗಜೇಬ್ ಅವರು ಈದ್ ಆಚರಣೆಗಾಗಿ ರಾಜೋರಿ ಜಿಲ್ಲೆಯಲ್ಲಿರುವ ತನ್ನ ನಿವಾಸಕ್ಕೆ ತೆರಳುತ್ತಿದ್ದಾಗ ಪುಲ್ವಾಮದ ಕಲಂಪೋರದಿಂದ ಉಗ್ರರು ಅಪಹರಿಸಿದ್ದರು.
Next Story





