ಚಂದ್ರಕಲಾ ನಂದಾವರರ ‘ ಹೆಣ್ಣಿಗೆ ವರ್ತಮಾನವಿಲ್ಲವೇ?’ ಕೃತಿ ಬಿಡುಗಡೆ

ಮಂಗಳೂರು, ಜೂ.16: ಹಿರಿಯ ಲೇಖಕಿ ಚಂದ್ರಕಲಾ ನಂದಾವರ ಅವರ ‘ಹೆಣ್ಣಿಗೆ ವರ್ತಮಾನವಿಲ್ಲವೇ ?’ ಕೃತಿ ಬಿಡುಗಡೆ ಕಾರ್ಯಕ್ರಮವು ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ಆಶ್ರಯದಲ್ಲಿ ಶನಿವಾರ ಸಂಘದ ಸಭಾಂಗಣದಲ್ಲಿ ಜರುಗಿತು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಬಿ.ಎಂ.ರೋಹಿಣಿ ‘ಚಳುವಳಿ ಮತ್ತು ಹೋರಾಟಗಳಿಂದ ಕೂಡಿದ ಲೇಖಕಿ ಚಂದ್ರಕಲಾ ನಂದಾವರ ಅವರ ಬರಹಗಳಲ್ಲಿ ಹೆಣ್ಣಿನ ಅಸ್ಮಿತೆ ಹಾಗೂ ಬದ್ಧತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಂದ್ರಕಲಾ ಅವರ ಬರಹಗಳಿಗೆ ಅದರದ್ದೇ ಆದ ತೂಕ, ಮಹತ್ವ ಇದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಬರೆಯುವ ಸಾಹಿತ್ಯಕ್ಕಿಂತ ಇದು ತುಂಬಾ ಭಿನ್ನವಾಗಿದೆ. ಹೋರಾಟ ಅಂದರೆ ಮಹಿಳೆಯರೆಲ್ಲಾ ಬೀದಿಗಿಳಿದು ಹೋರಾಟ ಮಾಡಬೇಕೆಂದು ಅಲ್ಲ. ಒಳ್ಳೆಯ ಉದ್ದೇಶಕ್ಕಾಗಿ ನಡೆಯುವ ಹೋರಾಟಕ್ಕೆ ಎಲ್ಲರ ಬೆಂಬಲ ಬೇಕು. ಆದರೆ ಸೇಫ್ ರೆನ್‌ನಲ್ಲಿ ಇದ್ದೇವೆಂದು ಭಾವಿಸಿರುವ ಕೆಲವರು ಸಮಾಜದ ಯಾವುದೇ ಆವಶ್ಯಕತೆಗಳಿಗೆ ಸ್ಪಂದಿಸುತ್ತಿಲ್ಲ.
ಗಾಂಧೀಜಿಯವರು ಕೂಡ ಆರಂಭದಲ್ಲಿ ಮಹಿಳೆಯರ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿರಲಿಲ್ಲ. ಆದರೆ ಅವರು ನಂತರದ ದಿನಗಳಲ್ಲಿ ಸ್ವಾತಂತ್ರ ಹೋರಾಟದಲ್ಲಿ ಮಹಿಳೆಯ ಪಾತ್ರದ ಬಗ್ಗೆ ಹೆಚ್ಚಿನ ವಿಶ್ವಾಸ ಹಾಗೂ ಭರವಸೆ ಇಟ್ಟುಕೊಂಡರು ಎಂದು ಬಿ.ಎಂ.ರೋಹಿಣಿ ಹೇಳಿದರು.
ಹೆಣ್ಣಿಗೆ ಶಿಕ್ಷಣ ನೀಡುವುದು ವ್ಯರ್ಥ ಎನ್ನುವ ಕಾಲ ಬದಲಾಗಿದೆ. ಮಾಸ್ತಿ, ನಿಸಾರ್ ಅಹ್ಮದ್ ಕೂಡ ಮಹಿಳೆಯರ ಸಾಹಿತ್ಯದ ಬಗ್ಗೆ ಹಿಂದೆ ಲಘುವಾಗಿ ಮಾತನಾಡಿದ್ದರು. ಇಂತಹ ಪ್ರತಿಕೂಲ ಪರಿಸ್ಥಿತಿಯೇ ಮಹಿಳೆಯರಲ್ಲಿ ಅಸ್ಮಿತೆಯನ್ನು ಕಂಡುಕೊಳ್ಳುವ ಹಠವನ್ನು ಹುಟ್ಟು ಹಾಕಿತು. ಮಹಿಳೆ ಗರಿಕೆ ಹುಲ್ಲು ಇದ್ದ ಹಾಗೆ. ಅವುಗಳನ್ನು ಬೆಂಕಿಯಲ್ಲಿ ಸುಟ್ಟು ಹಾಕಿದರೂ ಒಂದು ಮಳೆಗೆ ಚಿಗುರಿ ಎದ್ದು ನಿಲ್ಲುವ ಸಾಮರ್ಥ್ಯವನ್ನು ಗರಿಕೆ ಹುಲ್ಲು ಹೊಂದಿದೆ ಎಂದು ಬಿ.ಎಂ. ರೋಹಿಣಿ ಬಣ್ಣಿಸಿದರು.
ಕೃತಿ ಪರಿಚಯಿಸಿದ ಉಪನ್ಯಾಸಕಿ ಡಾ.ಶೈಲಾ, ಸ್ತ್ರೀ ಕೇಂದ್ರೀಕೃತ ಹಿನ್ನೆಲೆ ಹಾಗೂ ಮಹಿಳಾ ಪರ ಕಾಳಜಿ ಹೊಂದಿರುವ ಚಂದ್ರಕಲಾ ನಂದಾವರ ಅವರ ಬರಹಗಳು ಮಹಿಳೆಯರ ಆವಶ್ಯಕತೆಗಳ ಬಗ್ಗೆ ಚಿಂತನೆಗೆ ಹಚ್ಚುತ್ತದೆ ಎಂದರು.
ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ಅಧ್ಯಕ್ಷೆ ಶಶಿಲೇಖಾ ಬಿ. ಅಧ್ಯಕ್ಷತೆ ವಹಿಸಿದ್ದರು. ರೂಪಕಲಾ ಆಳ್ವ, ವಿಜಯಲಕ್ಷ್ಮೀ ಆಳ್ವ, ವಿಜಯಲಕ್ಷ್ಮೀ ಭಟ್ ಯು. ಉಪಸ್ಥಿತರಿದ್ದರು. ಅರುಣಾ ನಾಗರಾಜ್ ವಂದಿಸಿದರು.







