ಎಪಿಡಿಯಿಂದ RECYCLEINDIA.ORG ವೆಬ್ ಸೈಟ್ ಆರಂಭ
ಘನತ್ಯಾಜ್ಯ ವಿಲೇವಾರಿ ಸಂಬಂಧಿಸಿದ ಎಲ್ಲ ಮಾಹಿತಿ ಒಂದೆಡೆ ಲಭ್ಯ

ಮಂಗಳೂರು, ಜೂ. 16 : ಪರಿಸರ ಸಂರಕ್ಷಣೆ ಮತ್ತು ಘನ ತ್ಯಾಜ್ಯ ವಿಲೇವಾರಿ (ಎಸ್ ಡಬ್ಲ್ಯು ಎಂ) ಕೇಂದ್ರೀಕರಿಸಿ ಸಮಾಜ ಮುಖಿ ಚಟುವಟಿಕೆ ನಡೆಸುತ್ತಿರುವ ಆಂಟಿ ಪೊಲ್ಯೂಷನ್ ಡ್ರೈವ್ (ಎಪಿಡಿ) ಪ್ರತಿಷ್ಠಾನ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಮತ್ತು ಸಂಪರ್ಕ ವಿವರಗಳನ್ನು ನೀಡುವ ಹೊಸ ಜಾಲತಾಣವನ್ನು ಲೋಕಾರ್ಪಣೆ ಮಾಡಿದೆ.
RECYCLEINDIA.ORG (ಮರುಬಳಕೆ ಇಂಡಿಯಾ)ಎಂಬವೆಬ್ ಸೈಟ್ ಮತ್ತು ಎಪಿಡಿ ಹೊರ ತಂದಿರುವ ಕರಪತ್ರವನ್ನು ಗುರುವಾರ ಮಂಗಳೂರು ಪದುವ ಶಾಲೆಯ ಆವರಣದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಚಾಲನೆ ನೀಡಿದರು.
ಮಂಗಳೂರು ಮಹಾನಗರಪಾಲಿಕೆಯ ಕಾರ್ಫೋರೇಟರ್ ರೂಪಾ ಡಿ. ಬಂಗೇರ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನಿಲ್ ರೊನಾಲ್ಡ್ ಫರ್ನಾಂಡಿಸ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ, ಎಪಿಡಿ ಪ್ರತಿಷ್ಠಾನದ ಸಂಸ್ಥಾಪಕ ಅಬ್ದುಲ್ಲಾ ಎ. ರೆಹಮಾನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದವ್ಯಾಸ ಕಾಮತ್ ಅವರು, ಘನತ್ಯಾಜ್ಯ ವಿಲೇವಾರಿಯಲ್ಲಿ ಭಾಗ ವಹಿಸುವುದು ಎಲ್ಲರ ಹೊಣೆಗಾರಿಕೆ ಆಗಿದ್ದು, ಈ ನಿಟ್ಟಿನಲ್ಲಿ ಎಪಿಡಿ ಪ್ರತಿಷ್ಠಾನ ಮಾಡಿರುವ ಪ್ರಯತ್ನವನ್ನು ತಾನು ಅಭಿನಂದಿಸುತ್ತೇನೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬೆಳೆಯುತ್ತಿರುವ ನಗರ ಮಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಘನ ತ್ಯಾಜ್ಯಗಳನ್ನು ಉತ್ಪಾದನೆ ಆಗುತ್ತಿದೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡುವ ಅಗತ್ಯ ಕೂಡ ಇದೆ. ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಹೆಚ್ಚು ಮುಖ್ಯವಾಗಿದೆ. ನಾಗರಿಕರಲ್ಲಿ ಅರಿವು ಮೂಡಿಸಲು ಪಾಲಿಕೆ ಮತ್ತು ಎಪಿಡಿ ಫೌಂಡೇಶನ್ ಇನ್ನಷ್ಟು ಕೆಲಸ ಮಾಡುವುದಾದರೆ ತಾನು ಎಲ್ಲ ರೀತಿಯ ಬೆಂಬಲ ನೀಡುವುದಾಗಿ ವೇದವ್ಯಾಸ ಕಾಮತ್ ಹೇಳಿದರು.
ನಮ್ಮ ನಗರವನ್ನು ಸ್ವಚ್ಛವಾಗಿ ಇರಿಸಿಕೊಂಡು ಪರಿಸರ ಸಂರಕ್ಷಣೆ ಮಾಡಲು ಎಲ್ಲರೂ ಒಟ್ಟಾಗಿ ದುಡಿಯಬೇಕಾಗಿದೆ. ಎಪಿಡಿ ಫೌಂಡೇಶನ್ ಆರಂಭಿಸಿರುವ ಜಾಲತಾಣದಲ್ಲಿ ದೊರಕುವ ಮಾಹಿತಿಯು ಸಾರ್ವಜನಿಕರಿಗೆ ಉಪಯೋಗ ಆಗಲಿ. ಆ ಮೂಲಕ ಜನರು ಮೂಲದಲ್ಲೇ ಕಸ ವಿಂಗಡನೆ ಮಾಡುವ ಮತ್ತು ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಮೂಲ ಮಂಗಳೂರು ಸ್ಮಾರ್ಟ್ ಸಿಟಿಗೆ ತನ್ನದೇ ಆದ ಕೊಡುಗೆ ನೀಡಲಿ ಎಂದವರು ಹಾರೈಸಿದರು.
ಮಂಗಳೂರಿನ ಜನತೆ ಮೂಲದಲ್ಲೇ ಶುಷ್ಟ ಕಸ ಮತ್ತು ಇತರ ಕಸಗಳನ್ನು ಪ್ರತ್ಯೇಕಿಸಿ ನೀಡುವ ಸಂಪ್ರದಾಯವನ್ನು ಜನರು ಅನುಸರಿಸಲು ಎಪಿಡಿ ಫೌಂಡೇಶನ್ ಆರಂಭಿಸಿದ ಈ ಕೆಲಸ ಸಹಾಯ ಆಗಲಿ. ನಗರವನ್ನು ಸ್ವಚ್ಛವಾಗಿ ಇರಿಸುವ ಹೊಣೆಗಾರಿಗೆ ನಮಗೆ ಎಲ್ಲಿರಿಗೂ ಇದ್ದು, ಜನಪ್ರತಿನಿಧಿಯಾಗಿ ತನ್ನ ಸಹಕಾರವನ್ನು ನೀಡುವುದಾಗಿ ಶಾಕ ಡಾ. ಭರತ್ ಶೆಟ್ಟಿ ಹೇಳಿದರು.
ಎಪಿಡಿ ಫೌಂಡೇಶನಿನ ಪ್ರಯತ್ನ ಮತ್ತು ಚಟುವಟಿಕೆಗಳನ್ನು ಸ್ಥಳೀಯ ಕಾರ್ಪೋರೇಟರ್ ರೂಪಾ ಡಿ. ಬಂಗೇರ ಅವರು ಶ್ಲಾಘಿಸಿದರು. ಔಪಚಾರಿಕ ಕಾರ್ಯಕ್ರಮದ ಅನಂತರ ರಮಝಾನ್ ಉಪವಾಸದ ಅಂಗವಾಗಿ ಹಬ್ಬದ ಮುನ್ನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಇಫ್ತಾರ್ ಆಹಾರ ಪೊಟ್ಟಣವನ್ನು ಎಪಿಡಿ ಫೌಂಡೇಶನಿನ ವತಿಯಿಂದ ವಿತರಿಸಲಾಯಿತು.
ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಮಂಗಳೂರಿನ ನಾಗರಿಕರಿಗೆ ಸ್ಪಷ್ಟ ಮಾಹಿತಿ ಮತ್ತು ಅಂಕಿ ಅಂಶಗಳ ಅಗತ್ಯ ಇದೆ ಎಂದು ಮನಗಂಡ ಎಪಿಡಿ ಫೌಂಡೇಶನ್ ಇಂತಹ ಒಂದು ಜಾಲತಾಣ ಆರಂಭಿಸಲು ನಿರ್ಧರಿಸಿತ್ತು. ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ದೇಶದ ನಾಗರಿಕರಲ್ಲಿ ಕಾಳಜಿ ಮತ್ತು ಅಭ್ಯಾಸದ ಕೊರತೆ ಇದೆ. ವೈಜ್ಞಾನಿಕ ಮತ್ತು ಸುಸ್ಥಿರ ರೀತಿಯಲ್ಲಿ ತ್ಯಾಜ್ಯವನ್ನು ನಿರ್ವಹಿಸುವ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಸಮರ್ಪಿತವಾದ ಸಮಗ್ರ ವೆಬ್ಸೈಟ್ಒದಗಿಸುತ್ತದೆ. ಈ ವೆಬ್ಸೈಟ್ ಮರುಬಳಕೆ ಇಂಡಿಯಾವು ಪ್ರಸ್ತುತ ಮಂಗಳೂರು ಕೇಂದ್ರೀಕೃತವಾಗಿದೆ. ನಗರದೊಳಗಿನ ಸ್ಥಳೀಯ ಮರುಬಳಕೆ ಕೇಂದ್ರಗಳಿಗೆ ಜನರನ್ನು ಸಂಪರ್ಕಿಸುವ ಜೊತೆಗೆ ಇದು 200+ ತ್ಯಾಜ್ಯ ವಸ್ತುಗಳ ಬಗ್ಗೆ ಮಾಹಿತಿ ನೀಡುತ್ತದೆ ಎಂದು ಅಬ್ದುಲ್ಲಾ ರೆಹಮಾನ್ ತಿಳಿಸಿದರು.
ಭಾಸ್ಕರ್ ಅರಾಸ ಸ್ವಾಗತಿಸಿದರು. ಸಂವೆದನಾ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಮಧು ಮಯಿಲಂಕೋಡಿ ಕಾರ್ಯಕ್ರಮ ನಿರೂಪಿಸಿದುರು.







