ಸಿದ್ಧಾಪುರ ಜಿಪಂ ಉಪಚುನಾವಣೆ: ಬಿಜೆಪಿಗೆ ಗೆಲುವು

ರೋಹಿತ್ ಕುಮಾರ್
ಉಡುಪಿ, ಜೂ.17: ಉಡುಪಿ ಜಿಲ್ಲಾ ಪಂಚಾಯತ್ ಸಿದ್ದಾಪುರ ಕ್ಷೇತ್ರಕ್ಕೆ ಜೂ.14ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರೋಹಿತ್ ಕುಮಾರ್ ಶೆಟ್ಟಿ 3,360 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಸಿದ್ದಾಪುರ ಜಿಪಂ ಸದಸ್ಯರಾಗಿದ್ದ ಬಿಜೆಪಿಯ ಹಾಲಾಡಿ ತಾರನಾಥ ಶೆಟ್ಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಕುಂದಾಪುರ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಇಂದು ನಡೆಯಿತು.
ಕ್ಷೇತ್ರದ ಒಟ್ಟು 33188 ಮತದಾರರ ಪೈಕಿ 21048 ಮಂದಿ ಮತದಾನ ಮಾಡಿದ್ದರು. ಇದರಲ್ಲಿ ರೋಹಿತ್ ಕುಮಾರ್ ಶೆಟ್ಟಿ 11926 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನ ಕುಮಾರ್ ಶೆಟ್ಟಿ 8566 ಮತಗಳನ್ನು ಗಳಿಸಿದರು. ಜೆಡಿಎಸ್ ಅಭ್ಯರ್ಥಿ ಅರುಣ ಶೆಟ್ಟಿ 276 ಮತಗಳನ್ನು ಪಡೆದಿದ್ದಾರೆ. 280 ನೋಟಾ ಮತ ಚಲಾವಣೆಯಾಗಿದೆ.
ಗ್ರಾಪಂ ಉಪಚುನಾವಣೆ ಫಲಿತಾಂಶ
ಉಡುಪಿ ತಾಲೂಕಿನ ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ 34 ಕುದಿ- 4 ಕ್ಷೇತ್ರಕ್ಕೆ ಜೂ.14ರಂದು ನಡೆದ ಉಪಚುನಾವಣೆಯಲ್ಲಿ ಶಜಿತ್ ಶೆಟ್ಟಿ 300 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಗಣೇಶ್ ಆಚಾರ್ಯ 130 ಮತಗಳನ್ನು ಗಳಿಸಿದ್ದಾರೆ. 9 ಮತಗಳು ತಿರಸ್ಕೃತವಾಗಿದೆ. ಬಾರಕೂರು ಗ್ರಾಪಂನ ಕಚ್ಚೂರು-1ರ ಕ್ಷೇತ್ರದಲ್ಲಿ ಸಂತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.





