ಲಾರಿ ಮಾಲಕರ ಮುಷ್ಕರ: ದಿನನಿತ್ಯ ಬಳಕೆ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ

ಬೆಂಗಳೂರು, ಜೂ. 18: ಡೀಸೆಲ್ ದರ ಏರಿಕೆ, ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ಖಂಡಿಸಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಲಾರಿ ಮಾಲಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ನಾಳೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.
ರಾಜ್ಯದಲ್ಲಿ ಲಾರಿ ಮುಷ್ಕರದಿಂದಾಗಿ ಹೊರಗಡೆಯಿಂದ ನಗರಕ್ಕೆ ಆಗಮಿಸುತ್ತಿದ್ದ ಲಾರಿಗಳ ಪೈಕಿ ಶೇ.90 ರಷ್ಟು ಸಂಪೂರ್ಣ ಸ್ಥಗಿತಗೊಂಡಿದ್ದವು. ಇಂದು ಅದು ಮುಂದುವರಿಯಲಿದ್ದು, ಅಕ್ಕಿ, ಗೋದಿ, ತರಕಾರಿ ಸೇರಿದಂತೆ ವಿವಿಧ ದಿನನಿತ್ಯ ಬಳಕೆ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಮೂರು ಲಕ್ಷ ಸೇರಿ ರಾಜ್ಯದಲ್ಲಿ 9 ಲಕ್ಷದ 30 ಸಾವಿರ ಲಾರಿಗಳೂ ಹಾಗೂ ದೇಶಾದ್ಯಂತ 93 ಲಕ್ಷ ಲಾರಿಗಳ ಮಾಲಕರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಸಾಗಾಣೆ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ.
ವೈಟ್ ಫೀಲ್ಡ್‌ನಲ್ಲಿರುವ ಕಂಟೇನರ್ ಗೂಡ್‌ಶೆಡ್ ಸಂಪೂರ್ಣ ಸ್ಥಗಿತಗೊಂಡಿದೆ. ಈ ಪ್ರದೇಶದಲ್ಲಿ ಅಂದಾಜು ಒಂದು ಸಾವಿರಕ್ಕೂ ಅಧಿಕ ಲಾರಿಗಳು ಯಾವುದೇ ಸರಕು ಸಾಗಾಣೆ ಮಾಡದೆ ನಿಂತಲ್ಲಿಯೇ ನಿಂತುಕೊಂಡಿದೆ. ಅಲ್ಲದೆ, ಯಶವಂತಪುರ ದೇವರಾಜ ಟರ್ಮಿನಲ್, ಎಪಿಎಂಸಿ ಸೇರಿದಂತೆ ರಾಜ್ಯ ಹಾಗು ರಾಷ್ಟ್ರ ಹೆದ್ದಾರಿಗಳಲ್ಲಿ ಲಾರಿಗಳು ನಿಂತುಕೊಂಡಿವೆ.
ಥರ್ಡ್ ಪಾರ್ಟಿ ಪ್ರೀಮಿಯಂ ಹಣವನ್ನು 27 ಸಾವಿರದಿಂದ 48 ಸಾವಿರಕ್ಕೆ ಹೆಚ್ಚಳ ಮಾಡಿರುವುದು ಹಾಗು ಡೀಸೆಲ್ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕಡಿವಾಣ ಹಾಕದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅಖಿಲ ಭಾರತ ಸಂಘಟನೆ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯದಲ್ಲಿಯೂ ಲಾರಿ ಮಾಲಕರ ಸಂಘ ಮತ್ತು ಅಖಿಲ ಭಾರತ ಸರಕು ಮತ್ತು ಸೇವಾ ಸರಬರಾಜು ವಾಹನಗಳ ಮಾಲಕರ ಒಕ್ಕೂಟದ ನೇತೃತ್ವದಲ್ಲಿ ಮುಷ್ಕರ ನಡೆಸಲಾಗುತ್ತಿದೆ.
ಕೇಂದ್ರ ಸರಕಾರ ಪದೇ ಪದೇ ಡೀಸೆಲ್-ಪೆಟ್ರೋಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ. ಇದರಿಂದಾಗಿ ಲಾರಿ ಮಾಲಕರು ಮತ್ತು ಸಿಬ್ಬಂದಿಗೆ ಅಧಿಕ ಹೊರೆಯಾಗುತ್ತಿದೆ. ಈ ಸಂಬಂಧ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಗೆ ಅಖಿಲ ಭಾರತ ಸಂಘಟನೆಗಳಿಂದ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ದೇಶಾದ್ಯಂತ ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದು ಲಾರಿ ಮಾಲಕರು ತಿಳಿಸಿದ್ದಾರೆ.
ದೇಶಾದ್ಯಂತ 93 ಲಕ್ಷಕ್ಕೂ ಅಧಿಕ ಸರಕು ಸಾಗಾಣೆ ವಾಹನಗಳು ತಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಕೈ ಬಿಡುವುದಿಲ್ಲ ಎಂದು ಮಾಲಕರ ಸಂಘ ಎಚ್ಚರಿಕೆ ನೀಡಿದ್ದು, ಥರ್ಡ್ ಪಾರ್ಟಿ ಪ್ರೀಮಿಯಂ ಹಣವನ್ನು 1117ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಸಂಬಂಧ ಶೀಘ್ರ ಸರಕಾರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಕೇಂದ್ರ ಸರಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.







