ಪಕ್ಷದ ‘ಸೇವೆ’ಯನ್ನು ಅವರು ತಪ್ಪಾಗಿ ತಿಳಿದಿರಬೇಕು: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು, ಜೂ. 18: ‘ದೇವರ ಸೇವೆ, ಅಭಿಷೇಕ ಸೇವೆ, ಉರುಳು ಸೇವೆ, ಪಕ್ಷದ ಸೇವೆ. ಹೀಗೆ ಹಲವು ‘ಸೇವೆ’ಗಳು ನಮ್ಮ ಕಡೆ ಪ್ರಚಲಿತದಲ್ಲಿವೆ. ಜಯಮಾಲಾರ ರಾಜಕೀಯ ‘ಸೇವೆ’ ಪಕ್ಷಕ್ಕೆ ಇಷ್ಟ ಆಗಿರಬಹುದು. ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿರಬೇಕೆಂಬ ನನ್ನ ಹೇಳಿಕೆಯನ್ನು ಅವರು ತಪ್ಪಾಗಿ ತಿಳಿದುಕೊಂಡಿರಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎನ್ನುವುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿಕೆಗೆ ತಿರುಗೇಟು ನೀಡಿದರು.
ನನಗೆ ಸಚಿವ ಸ್ಥಾನ ನೀಡುವುದು ಅಥವಾ ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು, ಮಂತ್ರಿ ಸ್ಥಾನ ಸಿಕ್ಕರೆ ಖುಷಿ. ಸಿಗದಿದ್ದರೆ ತನಗೆ ಯಾವುದೇ ರೀತಿಯ ಬೇಸರವಿಲ್ಲ. ಏನೇ ಆದರೂ ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನು ಪ್ರಸ್ತುತದಲ್ಲಿ ನಂಬಿಕೆಯಿಟ್ಟವಳು. ನಾಳೆ-ನಾಡಿದ್ದು ಅನ್ನುವುದರಲ್ಲಿ ನಂಬಿಕೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು.





