ಬೆಂಗಳೂರು: ದಿವ್ಯಾಂಗ ವ್ಯಕ್ತಿ ಜೀವನ ಕುರಿತ ಕಾರ್ಯಾಗಾರ
ಬೆಂಗಳೂರು, ಜೂ. 18: ದೃಷ್ಟಿ ವಿಕಲಚೇತನ ವ್ಯಕ್ತಿಗಳಿಗೆ ತಂತ್ರಜ್ಞಾನ ಕುರಿತ ಅಗತ್ಯ ಶಿಕ್ಷಣ ನೀಡುವುದರ ಜತೆಗೆ ಅಗತ್ಯ ಉದ್ಯೋಗ ಕಲ್ಪಿಸಿದರೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸಬಹುದು ಎಂದು ರಾಜ್ಯ ವಿಕಲಚೇತನರ ಆಯುಕ್ತ ವಿ.ಎಸ್.ಬಸವರಾಜು ಇಂದಿಲ್ಲಿ ತಿಳಿಸಿದರು.
ಸೋಮವಾರನ ಇಲ್ಲಿನ ಅರಮನೆ ರಸ್ತೆಯ ಸೆಂಟ್ರಲ್ ಕಾಲೇಜು ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿವಿಯ ಬ್ರೇಲ್ ಸಂಶೋಧನಾ ಕೇಂದ್ರ ಏರ್ಪಡಿಸಿದ್ದ, ‘ದಿವ್ಯಾಂಗ ವ್ಯಕ್ತಿ ಜೀವನ ಕುರಿತ ಕಾರ್ಯಾಗಾರ’ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೃಷ್ಟಿ ವಿಕಲಚೇತನ ಅಭ್ಯರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ, ಆಧುನಿಕ ಶಿಕ್ಷಣ ದೊರಕಿಸುವ ಜೊತೆಗೆ ತಂತ್ರಜ್ಞಾನ ಬಳಕೆ ಕುರಿತು ತಿಳಿಯಪಡಿಸಿದರೆ, ಉದ್ಯೋಗ ಕಲ್ಪಿಸಬಹುದು. ಅದೇ ರೀತಿ, ಸಂವಹನ ಸೇರಿದಂತೆ ಎಲ್ಲ ವಲಯದಲ್ಲೂ ಅಭಿವೃದ್ಧಿ ಕಾಣಬಹುದಾಗಿದೆ ಎಂದು ನುಡಿದರು.
2013ರ ಅಂಗವಿಕಲರ ಹಕ್ಕುಗಳ ಕಾಯ್ದೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಅನೇಕ ಸೌಲಭ್ಯಗಳು ದೊರೆಯುತ್ತಿವೆ ಎಂದ ಅವರು, ಅಂಗವಿಕಲರಲ್ಲಿ ಪ್ರತಿಭೆ ಇದ್ದು, ಉತ್ತಮ ಆಲೋಚನೆ ಮತ್ತು ಧೈರ್ಯದಿಂದ ಬಾಳುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಪ್ರತಿಭೆಯನ್ನು ಸಾಬೀತು ಪಡಿಸಲು ಅವಿರತವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ಬೆಂಗಳೂರು ವಿವಿಯ ರಿಜಿಸ್ಟ್ರಾರ್ ಡಾ.ಬಿ.ಕೆ.ರವಿ ಮಾತನಾಡಿ, ದೇಶದ ಕೆಲವೇ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರಿನ ವಿವಿಯ ಬ್ರೇಲ್ ಸಂಶೋಧನಾ ಕೇಂದ್ರ ಒಂದಾಗಿದೆ. ಈ ಸಂಸ್ಥೆಯೂ ನೂರಾರು ದಿವ್ಯಾಂಗ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ದುಡಿಯುತ್ತಿದೆ. ಇದರ ಲಾಭ ಪಡೆಯುವ ವಿದ್ಯಾರ್ಥಿಗಳು ಎಲ್ಲರಂತೆ ಸಾಧಕರಾಗಬೇಕು ಎಂದು ಕರೆ ನೀಡಿದರು.
ಅಂಗವಿಕಲರ ಶ್ರೇಯೋಭಿವೃದ್ಧಿಗೆ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕೆಲವೊಂದು ಸೌಲಭ್ಯಗಳ ಕೊರತೆ ಈಗಲೂ ಇದೆ ಎಂದ ಅವರು, ತಾವು ಯಾರೂ ಅಂಗವಿಕಲಕರೆಂದು ಕೀಳರಿಮೆಗೆ ಗುರಿಯಾಗಬಾರದು. ಸಮಾಜ ನಿಮ್ಮ ಜೊತೆಗಿದ್ದು, ತಮ್ಮ ಸಬಲೀಕರಣಕ್ಕಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಬ್ರೇಲ್ ಸಂಶೋಧನಾ ಕೇಂದ್ರದ ನಿರ್ದೇಶಕಿ ಪ್ರೊ.ಇಸ್ಮತ್ ಆಫ್ಶಾನ್ ಮಾತನಾಡಿ, ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಹತ್ತಾರು ವಿದ್ಯಾರ್ಥಿಗಳು ಪದವಿ ಪೂರೈಸಿ, ಹೊರಗಡೆ ಹೋಗುತ್ತಿದ್ದಾರೆ. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಸಂವಹನ, ತಂತ್ರಜ್ಞಾನ ಬಳಕೆ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದೆಂದರು.
ಕಾರ್ಯಾಗಾರದಲ್ಲಿ ಬೆಂಗಳೂರು ವಿವಿಯ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್, ಪ್ರೊ.ಐ.ಎಸ್.ಶಿವಕುಮಾರ್, ಪ್ರಣೇಶ್ ನಾಗರಿ, ಪಲ್ಲವಿ ಆಚಾರ್ಯ ಸೇರಿ ಪ್ರಮುಖರು ಉಪಸ್ಥಿತರಿದ್ದರು.







