ನೀರು ಬಿಡುವ ಅಧಿಕಾರ ರಾಜ್ಯ ಸರಕಾರಕ್ಕೆ ಬೇಕು: ಎಚ್.ಡಿ.ಕುಮಾರಸ್ವಾಮಿ

ಹೊಸದಿಲ್ಲಿ, ಜೂ.18: ಕೇಂದ್ರ ಸರಕಾರವು ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ವಿಚಾರದ ಕುರಿತು ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಲಾಶಯಗಳಲ್ಲಿ ಇರುವ ನೀರಿನ ಪ್ರಮಾಣವನ್ನು ಪ್ರತಿ ತಿಂಗಳು 10 ದಿನಗಳಿಗೆ ಒಂದು ಬಾರಿ ಅಳತೆ ಮಾಡಿ, ನೀರು ಬಿಡುಗಡೆ ಮಾಡಲು ಮಂಡಳಿಗೆ ಅಧಿಕಾರ ನೀಡಿರುವುದು ಅವೈಜ್ಞಾನಿಕವಾದದ್ದು ಎಂದರು.
ನಮ್ಮ ಜಲಾಶಯಗಳಿಂದ ನೀರು ಬಿಡುಗಡೆ ಮಾಡುವುದು, ಅಳತೆ ಮಾಡುವುದು, ನಮ್ಮ ರೈತರು ಯಾವ ರೀತಿಯ ಬೆಳೆ ಬೆಳೆಯಬೇಕು ಎಂಬುದರ ಕುರಿತು ಮಂಡಳಿಯವರು ನಿರ್ಣಯ ಮಾಡುವುದಾದರೆ ರೈತರನ್ನು ತೃಪ್ತಿಪಡಿಸುವವರು ಯಾರು? ಇದು ನಮ್ಮ ರೈತರ ಪಾಲಿಗೆ ಮಾರಕವಾದ ಅಂಶ ಎಂದು ಮುಖ್ಯಮಂತ್ರಿ ಹೇಳಿದರು.
ಭೌಗೋಳಿಕವಾಗಿ ನಾವು ಎತ್ತರದ ಪ್ರದೇಶದಲ್ಲಿದ್ದೇವೆ. ಸುಪ್ರೀಂಕೋರ್ಟ್ ಹಾಗೂ ನ್ಯಾಯಾಧೀಕರಣದ ಆದೇಶದ ಪ್ರಕಾರ ನಾವು ನಮ್ಮ ಜಲಾಶಯಗಳಿಂದ ನೀರನ್ನು ಬಿಡುತ್ತೇವೆ. ಆದರೆ, ನೆರೆಯ ರಾಜ್ಯಗಳಲ್ಲಿ ಉತ್ತಮ ಮಳೆಯಾಗಿ ಅವರ ಜಲಾಶಯಗಳು ಭರ್ತಿಯಾದಾಗ ಹೆಚ್ಚುವರಿ ನೀರು ಸಮುದ್ರಕ್ಕೆ ಹೋಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಆದುದರಿಂದ, ಜಲಾಶಯಗಳಿಂದ ಯಾವ ಸಮಯದಲ್ಲಿ ನೀರು ಬಿಡುಗಡೆ ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳುವ ಅಧಿಕಾರ ರಾಜ್ಯ ಸರಕಾರಕ್ಕೆ ಇರಬೇಕು. ಮಂಡಳಿಯವರೇ ನೀರು ಬಿಡುಗಡೆ ಮಾಡುವ ಕುರಿತು ತೀರ್ಮಾನ ಕೈಗೊಂಡರೆ ನಮ್ಮ ಪರಿಸ್ಥಿತಿ ಏನು? ರೈತರು ಯಾವ ರೀತಿಯ ಬೆಳೆ ಬೆಳೆಯಬೇಕು ಎಂದು ನಿರ್ದೇಶನ ನೀಡುವುದಾದರೆ ಹೇಗೇ? ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಇಲ್ಲಿನ ಹಾಗೂ ಅಲ್ಲಿನ ರೈತರು ಉಳಿಯಬೇಕು ಎಂದು ಅವರು ಹೇಳಿದರು.
ಅಂತರಾಜ್ಯ ಜಲ ವಿವಾದ ಬಗ್ಗೆ ಯಾವುದಾದರೂ ನಿರ್ಣಯ ಮಾಡಬೇಕಾದರೆ, ಮೊದಲು ಸಂಸತ್ತಿನಲ್ಲಿ ಆ ವಿಚಾರ ಚರ್ಚೆಯಾಗಬೇಕು. ಆದರೆ, ಕಾವೇರಿ ನಿರ್ವಹಣಾ ಮಂಡಳಿ ರಚನೆಯ ವಿಷಯವು ಸಂಸತ್ತಿನ ಮುಂದೆಯೇ ಹೋಗಿಲ್ಲ. ಆದರೂ, ಗೆಜೆಟ್ ನೋಟಿಫಿಕೇಷನ್ ಮಾಡಲಾಗಿದೆ. ಈ ಬಗ್ಗೆ ಪ್ರಧಾನಿ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕಾವೇರಿ ನಿರ್ವಹಣಾ ಮಂಡಳಿಯಲ್ಲಿರುವ ನಿಯಮಗಳಿಗೆ ನಮ್ಮ ಸರಕಾರದಿಂದ ಈವರೆಗೆ ನಾವು ಒಪ್ಪಿಗೆ ನೀಡಿಲ್ಲ. ಕೆಲವು ಲೋಪಗಳಿದ್ದು, ಅದನ್ನು ಸರಿಪಡಿಸಬೇಕಿದೆ. ನಿರ್ವಹಣಾ ಮಂಡಳಿ ರಚಿಸುವ ಅಧಿಕಾರ ಸಂಸತ್ತಿಗೆ ಮಾತ್ರವಿದೆ. ಸುಪ್ರೀಂಕೋರ್ಟ್‌ಗಲ್ಲ. ಅಂತರಾಜ್ಯ ಜಲ ವಿವಾದ ಕಾಯ್ದೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದು ಅವರು ಹೇಳಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದು, ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಾವು ಯಾವ ರೀತಿ ಹೋಗಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಅವರು ಏನು ಭಾವನೆಗಳನ್ನು ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಸ್ಥಾಪನೆಯ ಉದ್ದೇಶ ರಾಜ್ಯದಲ್ಲಿ ಸುಭದ್ರವಾದ ಸರಕಾರ ನೀಡುವುದಾಗಿದೆ. ಈ ಸಂಬಂಧ ಹಲವಾರು ಉತ್ತಮ ರೀತಿಯ, ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ನೀಡಲು ಅವರ ಸಂಪೂರ್ಣ ಸಹಕಾರ ಕೋರಿದ್ದೇನೆ. ರಾಹುಲ್‌ಗಾಂಧಿ ಎಲ್ಲ ವಿಷಯಗಳನ್ನು ನನ್ನಿಂದ ಪಡೆದು, ಸಹಕಾರ ನೀಡುವ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಸಂಪುಟ ವಿಸ್ತರಣೆ ಕುರಿತು ರಾಹುಲ್ ಗಾಂಧಿ ಜೊತೆ ನಾನು ಯಾವುದೆ ಚರ್ಚೆ ಮಾಡಿಲ್ಲ. ಕೆಲವು ಸಮಸ್ಯೆಗಳಿವೆ ಅದನ್ನು ಅವರ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿ ಅವರು ತೀರ್ಮಾನ ಕೈಗೊಳ್ಳುತ್ತಾರೆ. ನಿಗಮ, ಮಂಡಳಿಗಳ ನೇಮಕಾತಿ ಕುರಿತು ಸಮನ್ವಯ ಸಮಿತಿಗೆ ಅಧಿಕಾರ ನೀಡಿದ್ದು, ಅಲ್ಲಿಯೇ ಚರ್ಚಿಸಿ ನಿರ್ಧರಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕೇಂದ್ರ ಸರಕಾರದಿಂದ ನಮಗೆ ಸಿಗುತ್ತಿರುವ ಆರ್ಥಿಕ ನೆರವು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದೆ. ಇದನ್ನು ಸರಿಪಡಿಸಿಕೊಡುವಂತೆ ನಿನ್ನೆ ನಡೆದ ನೀತಿ ಆಯೋಗದ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದೇನೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಭೇಟಿ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿ ಉಪಸ್ಥಿತರಿದ್ದರು.







