11 ಮಂದಿ ಮೇಲ್ಮನೆ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಜೂ. 18: ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿರುವ ಕೆ.ಗೋವಿಂದರಾಜು, ಬಿ.ಎಂ.ಫಾರೂಖ್, ಕೆ.ಹರೀಶ್ ಕುಮಾರ್, ಅರವಿಂದ್ ಕುಮಾರ್ ಅರಳಿ, ಸಿ.ಎಂ.ಇಬ್ರಾಹೀಂ, ತೇಜಸ್ವಿನಿ ಗೌಡ, ಧರ್ಮೇಗೌಡ, ಕೆ.ಪಿ. ನಂಜುಂಡಿ, ರಘುನಾಥ್ ರಾವ್ ಮಲ್ಕಾಪುರೆ, ರವಿಕುಮಾರ್, ರುದ್ರೇಗೌಡ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಸಮ್ಮುಖದಲ್ಲಿ 11 ಮಂದಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಬಿಜೆಪಿಯ ಎನ್.ರವಿಕುಮಾರ್ ಭಗವಂತ ಮತ್ತು ಭಾರತ ಮಾತೆ ಹೆಸರಿನಲ್ಲಿ, ಜೆಡಿಎಸ್ ಪಕ್ಷದ ಎಸ್.ಎಲ್.ಧರ್ಮೇಗೌಡ ಭಗವಂತನ ಹೆಸರಿನಲ್ಲಿ ಹಾಗೂ ಬಿ. ಎಂ.ಫಾರೂಕ್ ಅಲ್ಲಾಹನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದ ಸದಸ್ಯರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿದ್ದರು.
ನಿವೃತ್ತಿ ಸದಸ್ಯರಿಗೆ ಬೀಳ್ಕೊಡುಗೆ: ವಿಧಾನ ಪರಿಷತ್ತಿನ ನಿವೃತ್ತ ಸದಸ್ಯರಾದ ಮೋಟಮ್ಮ, ರಾಮಚಂದ್ರಗೌಡ, ಅಮರನಾಥ್ ಪಾಟೀಲ್, ಎಂ.ಡಿ.ಲಕ್ಷ್ಮಿ ನಾರಾಯಣ್, ಡಿ.ಎಸ್.ವೀರಯ್ಯರಿಗೆ ಇದೇ ಸಂದರ್ಭದಲ್ಲಿ ಬೀಳ್ಕೊಡುಗೆ ನೀಡಲಾಯಿತು.







