ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿ ರಾಜೀನಾಮೆ

ಬೆಂಗಳೂರು, ಜೂ.18: ವಿಧಾನಪರಿಷತ್ತಿಗೆ ಮರು ಆಯ್ಕೆಯಾಗಲು ಅವಕಾಶ ಕಲ್ಪಿಸದ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದಲೇ ಅನ್ವಯವಾಗುವಂತೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸುದೀರ್ಘ ಪತ್ರ ಬರೆದಿರುವ ಪುಟ್ಟಸ್ವಾಮಿ, ಪಕ್ಷ ನೀಡಿದ ಅವಕಾಶದಲ್ಲಿ ಹಿಂದುಳಿದ ವರ್ಗಗಳನ್ನು ಅತ್ಯಂತ ಸಮರ್ಥವಾಗಿ ಸಂಘಟನೆ ಮಾಡಿರುವ ತೃಪ್ತಿ ನನಗಿದೆ. ನಾನು ಒಂದು ಜಾತಿಗೆ ಸೀಮಿತವಾಗದೆ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಅವರ ಹಕ್ಕು ಮತ್ತು ಸ್ಥಾನಮಾನಕ್ಕಾಗಿ 45 ವರ್ಷದ ರಾಜಕೀಯ ಜೀವನವನ್ನು ಒಂದು ಕಪ್ಪು ಚುಕ್ಕೆ ಇಲ್ಲದೆ ಸವೆಸಿದ್ದೇನೆ ಎಂದು ತಿಳಿಸಿದ್ದಾರೆ.
ಕಡಿಮೆ ಅವಧಿಗೆ ಮಂತ್ರಿಯಾಗಿ, ಬಹುಶಃ ದೇಶದಲ್ಲಿ ಪ್ರಥಮ ಬಾರಿಗೆ 41 ಸಾವಿರ ಸಹಕಾರ ಸಂಸ್ಥೆಗಳಿಗೆ ಪ್ರಬಲ ವಿರೋಧವಿದ್ದರೂ 2012ರಲ್ಲಿ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸಿ, ಹಿಂದುಳಿದ ವರ್ಗಗಳಿಗೆ ಎರಡು ಮೀಸಲಾತಿಯನ್ನು ನೀಡಿದೆನು. ಮಂತ್ರಿಯಾಗಿದ್ದರೂ ನನ್ನ ನಿಷ್ಠೆಯನ್ನು ತಮಗೆ ಬಹಿರಂಗವಾಗಿ ತೋರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಆ ಕಾರಣಗಳಿಗಾಗಿ ಯಾವುದೇ ಪ್ರಬಲ ಕಾರಣ ಇಲ್ಲದಿದ್ದರೂ ಮಂತ್ರಿ ಸ್ಥಾನದಿಂದ ನನ್ನನ್ನು ಕೈ ಬಿಡಲಾಯಿತು. ಆಗಲೂ ನಾನು ನನ್ನ ನಿಷ್ಠೆಯನ್ನು ಬದಲಿಸಲಿಲ್ಲ. ತಮ್ಮ ಜೊತೆಯಲ್ಲಿ ಕೈಜೋಡಿಸಿದ್ದೇನೆ. ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡ ಮೇಲೆ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ ಪ್ರಥಮ ಬಾರಿಗೆ ಬೂತ್, ಮಂಡಲ, ವಾರ್ಡ್, ಜಿಲ್ಲೆ ಮತ್ತು ರಾಜ್ಯ ಸಮಿತಿ ರಚನೆ ಮಾಡಿ ಎಲ್ಲ ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡುವಂತೆ ನೋಡಿಕೊಂಡಿದ್ದೇನೆ ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.
ಯಾವ ಸಂದರ್ಭದಲ್ಲಿಯೂ ತಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಕಳೆದ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾತಿ ಸಮೀಕರಣ ಹಾಗೂ ಅರ್ಹ ಮತ್ತು ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಒತ್ತಾಯ ಮಾಡಿರುವುದು ನಿಜ ಎಂದು ಅವರು ಹೇಳಿದ್ದಾರೆ. ನಾನು ನಂಬಿದ್ದು ಪಕ್ಷದಲ್ಲಿ ಒಬ್ಬ ದೇವರನ್ನು ಮಾತ್ರ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ಒಳ ಒಪ್ಪಂದವಿಲ್ಲದೆ ವಿರೋಧಿಗಳ ಹಲವು ಹಗರಣಗಳನ್ನು ಬಯಲಿಗೆ ಎಳೆದಿದ್ದೇನೆ. ಈಗ ನನ್ನ ರಕ್ಷಣೆಗೆ ಗತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.
ಯಾವ ಮಾನದಂಡ ಅನುಸರಿಸಿ ವಿಧಾನಪರಿಷತ್ತಿನ ಸದಸ್ಯತ್ವದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡದಿರುವುದು ಎಂದು ನನಗಾಗಲಿ ಅಥವಾ ಕರ್ನಾಟಕದ ಜನತೆಗಾಗಲಿ ಅರ್ಥವಾಗುತ್ತಿಲ್ಲ. ತಾವು ವಿಧಾನಪರಿಷತ್ತಿನ ಸದಸ್ಯತ್ವವನ್ನು ಮುಂದುವರೆಸುವುದರ ಜೊತೆಗೆ ಪಕ್ಷವನ್ನು ಪರಿಣಾಮಕಾರಿಯಾಗಿ ಸಮರ್ಥಿಸಲು ವಿಪಕ್ಷ ನಾಯಕರನ್ನಾಗಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದೀರಿ. ಆ ಮಾತು ತಪ್ಪಿದ್ದಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಪುಟ್ಟಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ಅವಿರತ ಶ್ರಮ, ಬದ್ಧತೆ, ನಂಬಿಕೆಯನ್ನು ಲೆಕ್ಕಿಸದೆ ಮಾಡಿದ ಸಮರ್ಥನೆ ಇವುಗಳೆಲ್ಲವೂ ಸೋತಿರುವುದಕ್ಕೆ ಅತೀವ ನೋವಾಗಿದೆ. ನನ್ನ ಜೀವನದ ಕೊನೆ ಹಂತದಲ್ಲಿ ಸಕ್ರಿಯ ರಾಜಕೀಯಕ್ಕೆ ತೆರೆ ಎಳೆದಿರುವುದು ಯಾವ ತಪ್ಪಿಗೆ ಎಂದು ತಿಳಿಯುತ್ತಿಲ್ಲ ಎಂದು ಅವರು ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.







