ತರೀಕೆರೆ: ಅಂಚೆ ಕಚೇರಿಯಲ್ಲಿ ಕಳ್ಳರ ಕೈಚಳಕ

ಚಿಕ್ಕಮಗಳೂರು, ಜೂ.18: ತರೀಕೆರೆ ಪಟ್ಟಣದಲ್ಲಿರುವ ಅಂಚೆ ಕಚೇರಿಯಲ್ಲಿ ಕೈಚಳಕ ತೋರಿರುವ ಕಳ್ಳರ ಗುಂಪು ಕಚೇರಿಯ ಬೀಗ ಒಡೆದು ಕೈಗೆ ಸಿಕ್ಕ ಹಣ ಹಾಗೂ ಕೆಲ ಮಹತ್ವದ ದಾಖಲೆಗಳನ್ನು ಕದ್ದೊಯ್ದಿದ್ದಾರೆಂದು ತಿಳಿದು ಬಂದಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಅಂಚೆ ಕಚೇರಿಗೆ ಶನಿವಾರ ಹಾಗೂ ರವಿವಾರ ರಜೆ ಇದ್ದುದನ್ನು ಗಮನಿಸಿದ ಕಳ್ಳರು ಶನಿವಾರ ಇಲ್ಲವೇ ರವಿವಾರ ಈ ಕೃತ್ಯ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದು, ಕೃತ್ಯ ಸೋಮವಾರ ಬೆಳಕಿಗೆ ಬಂದಿದೆ. ಅಂಚೆ ಕಚೇರಿಯ ಬೀಗ ಮುರಿದು ಕಚೇರಿಯ ಒಳಗಿದ್ದ ಸಿಸಿ ಕ್ಯಾಮರಾ ಒಡೆದಿರುವ ಕಳ್ಳರು ನಂತರ ಕಚೇರಿಯಲ್ಲಿ ಸಿಕ್ಕಿದ ಹಣ ಸೇರಿದಂತೆ ಕೆಲ ಮಹತ್ವದ ದಾಖಲೆಗಳನ್ನು ಹೊತ್ತೊಯ್ದಿದ್ದಾರೆ. ಕಚೇರಿಯ ಮುಖ್ಯ ಖಜಾನೆಯಲ್ಲಿ ಲಕ್ಷಾಂತರ ಹಣ ಇತ್ತು ಎನ್ನಲಾಗಿದ್ದು, ಖಜಾನೆ ಒಡೆಯಲು ಸಾಧ್ಯವಾಗದಿದ್ದರಿಂದ ಕಳ್ಳರು ಕೈಗೆ ಸಿಕ್ಕಷ್ಟೇ ಹಣವನ್ನು ದೋಚಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಅಂಚೇ ಕಚೇರಿ ಮುಖ್ಯಾಧಿಕಾರಿ ತರೀಕೆರೆ ಪೊಲೀಸರು ದೂರು ದಾಖಲಿಸಿಕೊಂಡು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಸೋಮವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.





