ಬೆಂಗಳೂರು: ಬಾಲ್ಡ್‌ವಿನ್ ಶಾಲೆಯ ಪ್ರಮಾಣಪತ್ರ ಹಿಂಪಡೆಯಲು ಮನವಿ
ಬೆಂಗಳೂರು, ಜೂ.18: ಪಠ್ಯಪುಸ್ತಕಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನಗರದ ಬಾಲ್‌ವಿನ್ ಶಾಲೆಗೆ ನೀಡಿದ್ದ ಐಸಿಎಸ್‌ಸಿ ಮತ್ತು ನಿರಪೇಕ್ಷಣಾ ಪ್ರಮಾಣ ಪತ್ರ ಹಿಂಪಡೆಯುವಂತೆ ಸರಕಾರಕ್ಕೆ ಮಕ್ಕಳ ಹಕ್ಕುಗಳ ಆಯೋಗ ಮನವಿ ಮಾಡಿದೆ.
ಶಾಲೆ ಆರಂಭವಾಗುವ ಮೊದಲೇ ಶಾಲೆಯಲ್ಲಿ ಪುಸ್ತಕಗಳಿಗಾಗಿ ಗಲಾಟೆ ನಡೆದಿದ್ದು, ಶುಲ್ಕ ಪಾವತಿಸಿ ಪಠ್ಯಪುಸ್ತಕಕ್ಕೆ ಹಣ ನೀಡಿದ್ದರೂ ಪುಸ್ತಕಗಳನ್ನು ವಿತರಿಸಲು ಶಾಲೆ ಹಿಂದೇಟು ಹಾಕುತ್ತಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದರು.
ನಗರದಲ್ಲಿ ಪ್ರತಿಷ್ಠಿತ ಶಾಲೆ ಎಂದು ಹೆಸರು ಪಡೆದಿರುವ ಬಾಲ್ಡ್‌ವಿನ್ ಶಾಲೆಯಲ್ಲಿ ಪೋಷಕರಿಂದ ಮಕ್ಕಳ ಪಠ್ಯಪುಸ್ತಕಗಳ ಶುಲ್ಕವನ್ನು ಡಿಡಿ ಮೂಲಕ ಪಡೆದಿದ್ದಾರೆ. ತಾವು ತಿಳಿಸಿದ ಸಂಸ್ಥೆಯಲ್ಲಿಯೇ ಪುಸ್ತಕಗಳನ್ನು ಪಡೆಯಲು ತಿಳಿಸಿದ್ದಾರೆ. ಆದರೆ, ಶಾಲೆ ಆರಂಭವಾಗಿ ಹಲವು ದಿನಗಳು ಕಳೆದರೂ ಪಠ್ಯಪುಸ್ತಕಗಳನ್ನು ನೀಡಿರಲಿಲ್ಲ. ಅಲ್ಲದೆ, ಬೇರೆ ಕಡೆಯಿಂದ ಪುಸ್ತಕಗಳನ್ನು ಪಡೆಯಬಾರದು ಎಂದು ಸೂಚಿಸಲಾಗಿದೆ. ಇದನ್ನು ಖಂಡಿಸಿ ನಮಗೆ ಪಠ್ಯಪುಸ್ತಕಗಳನ್ನು ವಿತರಣೆ ಮಾಡಿ ಅಥವಾ ಹಣ ವಾಪಸ್ ಕೊಡಿ ಎಂದು ಪ್ರಾಂಶುಪಾಲರ ಮೇಲೆ ಒತ್ತಡ ಪೋಷಕರು ಒತ್ತಡ ಹಾಕಿದಾಗ, ಪ್ರಾಂಶುಪಾಲರು ನನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದರು. ಅಲ್ಲದೆ, ಐಸಿಎಸ್‌ಸಿ ಪುಸ್ತಕಗಳನ್ನು ಸರಿಯಾಗಿ ವಿತರಣೆ ಮಾಡಿಲ್ಲ. ಇದಲ್ಲದೆ, ರವಿ ರೈಟ್ ಪಬ್ಲಿಷರ್ಸ್‌ನಿಂದಲೇ ಪುಸ್ತಕ ಖರೀದಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಪೋಷಕರು ದೂರು ನೀಡಿದ್ದರು.
ಪೋಷಕರು ನೀಡಿದ ದೂರಿನ ಅನ್ವಯ ತನಿಖೆ ನಡೆಸಿದ ಆಯೋಗದ ಅಧಿಕಾರಿಗಳು ಆರ್‌ಆರ್ ನಗರದ ಕೋ ಎಜುಕೇಷನ್ ಬಾಲ್ಡ್‌ವಿನ್ ಮತ್ತು ರಿಚ್‌ಮಂಡ್ ರಸ್ತೆಯಲ್ಲಿರುವ ಬಾಲಕಿಯರ ಮತ್ತು ಬಾಲಕರ ಬಾಲ್ಡ್‌ವಿನ್ ಶಾಲೆಗೆ ನೀಡಿರುವ ಐಸಿಎಸ್‌ಸಿ ಮತ್ತು ನಿರಪೇಕ್ಷಣಾ ಪ್ರಮಾಣ ಪತ್ರ ವಾಪಸ್ಸು ಪಡೆಯುವಂತೆ ಮಕ್ಕಳ ಆಯೋಗ ಸಲಹೆ ನೀಡಿದೆ.







