ಕಲಬುರಗಿ: ಭಗತ್ ಸಿಂಗ್ ಬಳಗದಿಂದ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಬಗ್ಗೆ ಜಾಗೃತಿ

ಕಲಬುರಗಿ, ಜೂ.18: ಪ್ರತಿದಿನ ಪ್ಲಾಸ್ಟಿಕ್ ಕ್ರೋಡೀಕರಣದ ಮೂಲಕ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಭಗತ್‌ಸಿಂಗ್ ಯುವಕರ ಬಳಗ’ದ ಕಾರ್ಯಕರ್ತರು ಪ್ರಯತ್ನ ಮಾಡುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
ಹತ್ತು ಯುವಕರನ್ನು ಒಳಗೊಂಡ ಸಕ್ರಿಯ ತಂಡವೊಂದು ನಗರದ ಪ್ರಮುಖ ಬೀದಿಗಳಲ್ಲಿ ಪ್ಲಾಸ್ಟಿಕ್ ಕ್ರೋಡೀಕರಣ ಮಾಡುವ ಮೂಲಕ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಏನೆಲ್ಲಾ ದುಷ್ಪರಿಣಾಮ ಬೀರುತ್ತದೆ ಎಂದು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ಕಳೆದ 13 ದಿನಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿರುವ ತಂಡ ಸತತವಾಗಿ 30 ದಿನಗಳ ಕಾಲ ಇದನ್ನು ಮುಂದುವರಿಸಲಾಗುತ್ತದೆ. ಇನ್ನೂ ಒಂದು ವಾರಗಳ ಕಾಲ ನಗರದ ವಿವಿಧ ಬೀದಿ, ರಸ್ತೆಗಳಲ್ಲಿ ಪ್ಲಾಸ್ಟಿಕ್ ಸಂಗ್ರಹ ಮಾಡಲಾಗುತ್ತದೆ. ಅನಂತರ 10 ದಿನಗಳ ಕಾಲ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬೀದಿ ನಾಟಕ, ಹಾಡುಗಳ ಮೂಲಕ ಹಾಗೂ ಪರಿಸರ ಜಾಗೃತಿ ಮತ್ತು ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸಲು ಕಿರುಚಿತ್ರ ಪ್ರದರ್ಶನ ಮಾಡಲಾಗುತ್ತದೆ ಎಂದು ತಂಡದ ಸದಸ್ಯ ರಾಹುಲ್ ಕನ್ನಡಿಗ ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ಬಳಕೆ ಪ್ರಮಾಣ ಅಧಿಕವಾಗುತ್ತಿದ್ದು, ಇದರಿಂದಾಗಿ ಪರಿಸರದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಆದುದರಿಂದಾಗಿ, ಸಾರ್ವಜನಿಕರಲ್ಲಿ ಸಣ್ಣ ಪ್ರಮಾಣದ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಂತಹ ಕಾರ್ಯಕ್ರಮಗಳು ರಾಜ್ಯದ ಎಲ್ಲ ಕಡೆಗಳಲ್ಲಿ ರೂಪುಗೊಂಡರೆ ಕನಿಷ್ಠವಾದರೂ ದುಷ್ಪರಿಣಾಮವನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ರಾಹುಲ್ ಹೇಳಿದರು.







