‘ಆರ್ಡರ್ಲಿ’ ಸೇವೆ ರದ್ದತಿಗೆ ಕೇರಳ ಸರಕಾರದ ನಿರ್ಧಾರ: ಪಿಣರಾಯಿ ವಿಜಯನ್

ತಿರುವನಂತಪುರಂ, ಜೂ.18: ಹಿರಿಯ ಪೊಲೀಸ್ ಅಧಿಕಾರಿಗಳ ವೈಯಕ್ತಿಕ ಸೇವೆಗೆ ಕಿರಿಯ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳುವ ‘ಆರ್ಡರ್ಲಿ’ ಪದ್ದತಿಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಳೆದ ವಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಜಿಡಿಪಿ) ಸುದೇಶ್ ಕುಮಾರ್ ಪುತ್ರಿ ಪೊಲೀಸ್ ವಾಹನದ ಡ್ರೈವರ್ ಗಾವಸ್ಕರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಆಶ್ವಾಸನೆ ನೀಡಿದ್ದಾರೆ. ಹಲ್ಲೆ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಹಲವು ದಶಕಗಳಿಂದ ಕಿರಿಯ ಪೊಲೀಸ್ ಸಿಬ್ಬಂದಿಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳ ವೈಯಕ್ತಿಕ ಸೇವೆಗೆ ಬಳಸಿಕೊಳ್ಳುವ ಪದ್ದತಿಯನ್ನು ಅನುಸರಿಸಲಾಗುತ್ತಿದೆ. “ಬ್ರಿಟಿಷ್ ಆಡಳಿತದಿಂದ ನಮಗೆ ಹಸ್ತಾಂತರವಾದ ನಾಚಿಕೆಗೇಡಿನ ಸಂಪ್ರದಾಯ ಇದಾಗಿದೆ. ಇದು ಅನಪೇಕ್ಷಣೀಯ ಕೃತ್ಯವಾಗಿದ್ದು ಮಾನವ ಹಕ್ಕುಗಳ ಉಲ್ಲಂಘನೆಗೆ ಆಸ್ಪದ ಮಾಡುವ ಇಂತಹ ಯಾವುದೇ ಕ್ರಮಗಳಿಗೆ ರಾಜ್ಯ ಸರಕಾರ ಆಸ್ಪದ ನೀಡುವುದಿಲ್ಲ. ರಾಜ್ಯದಲ್ಲಿ ಈ ಸಂಪ್ರದಾಯವನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಗುವುದು” ಎಂದು ವಿಜಯನ್ ತಿಳಿಸಿದ್ದಾರೆ.
ಪೊಲೀಸ್ ಪಡೆ ಶಿಸ್ತು ಹಾಗೂ ನಿಯಮ ಪರಿಪಾಲನೆಗೆ ಹೆಸರಾಗಿದೆ ಎಂದ ಅವರು, ರಾಜ್ಯ ಸರಕಾರ ಹಾಗೂ ಪೊಲೀಸ್ ಮುಖ್ಯಸ್ಥರ ಆದೇಶವನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹಲ್ಲೆ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಕೆ. ಶಬರೀನಾಥ್ ಅರ್ಪಿಸಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಈ ಮಧ್ಯೆ, ಎಜಿಡಿಪಿ ಪುತ್ರಿ ಸ್ನಿಗ್ಧಾ ತನ್ನನ್ನು ಅವಾಚ್ಯವಾಗಿ ನಿಂದಿಸಿ ಕುತ್ತಿಗೆ ಹಾಗೂ ಭುಜದ ಮೇಲೆ ಹಲ್ಲೆ ನಡೆಸಿರುವುದಾಗಿ ವಾಹನ ಚಾಲಕ ಗಾವಸ್ಕರ್ ದೂರು ನೀಡಿದ್ದಾರೆ. ಬೆಳಗ್ಗಿನ ನಡಿಗೆಗೆ ತೆರಳಿದ್ದ ಸ್ನಿಗ್ಧಾರನ್ನು ಮರಳಿ ಕರೆತರಲು ವಾಹನ ತರುವಾಗ ಸ್ವಲ್ಪ ವಿಳಂಬವಾಗಿದೆ ಎಂದು ಬೈದು ಆಕೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಸ್ನಿಗ್ಧಾ ವಿರುದ್ಧ ವಿವಿಧ ಪ್ರಕರಣಗಳಡಿ ಕೇಸು ದಾಖಲಾಗಿದ್ದರೆ, ಸ್ನಿಗ್ಧಾ ನೀಡಿರುವ ಪ್ರತಿದೂರಿನ ಹಿನ್ನೆಲೆಯಲ್ಲಿ ಗಾವಸ್ಕರ್ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡೂ ದೂರುಗಳ ಬಗ್ಗೆ ಕ್ರೈಂಬ್ರಾಂಚ್ ಎಜಿಡಿಪಿ ತನಿಖೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜ್ಯದ ಐಐಎಸ್ ಮತ್ತು ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರು ಮತ್ತಿತರರ ವೈಯಕ್ತಿಕ ಸೇವೆ ನಡೆಸುತ್ತಿರುವ ಆರ್ಡರ್ಲಿಗಳ ಬಗ್ಗೆ ವಿವರ ಸಲ್ಲಿಸುವಂತೆ ರವಿವಾರ ಡಿಜಿಪಿ ಲೋಕನಾಥ್ ಬೆಹೆರಾ ಆದೇಶ ಜಾರಿಗೊಳಿಸಿದ್ದಾರೆ. ಕೇರಳ ಪೊಲೀಸ್ ಸಂಘಟನೆ ಕೂಡಾ ಆರ್ಡರ್ಲಿ ಪದ್ದತಿಯನ್ನು ವಿರೋಧಿಸಿದೆ.







