"ಬಾಂಡ್ ಮೂಲಕ ಪಡೆಯುವ ಹಣ ರಾಜ್ಯದ ರೈತರ ಸಾಲಮನ್ನಾಕ್ಕೆ ಕೊಡಿ"
ಪ್ರಧಾನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ

ಬೆಂಗಳೂರು, ಜೂ. 18: ಬ್ಯಾಂಕುಗಳ ಪರಿಸ್ಥಿತಿ ಉತ್ತಮ ಪಡಿಸಲು ಕೇಂದ್ರ ಸರಕಾರ 2ಲಕ್ಷ ರೂ.ಹಣವನ್ನು ಬಾಂಡ್ ಮೂಲಕ ಪಡೆಯಲು ನಿರ್ಧಾರ ಮಾಡಿದ್ದು, ಆ ಹಣವನ್ನು ರೈತರ ಸಾಲಮನ್ನಾಕ್ಕೆ ನೆರವು ನೀಡಬೇಕೆಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾಲಮನ್ನಾ ಸೇರಿ ಕರ್ನಾಟಕದ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು.
ಆರ್ಥಿಕ ನೆರವಿಗೆ ಕೋರಿಕೆ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಭೇಟಿ ವೇಳೆ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಭದ್ರತೆ ದೃಷ್ಟಿ ಕೆಲ ವಿಶೇಷ ಯೋಜನೆಗಳ ಜಾರಿಗೆ ಆರ್ಥಿಕ ನೆರವು ಕೋರಿದ್ದೇನೆ. ಅಲ್ಲದೆ, ಪ್ರಕೃತಿ ವಿಕೋಪಕ್ಕೆ ಎನ್‌ಡಿಆರ್‌ಎಫ್ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ಅಲ್ಲದೆ, ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ನೀಡಿರುವ ಅನುದಾನದಲ್ಲಿ ಆಗಿರುವ ಅನ್ಯಾಯದ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದ ಅವರು, ನಮ್ಮ ಮನವಿಯನ್ನು ಆಲಿಸಿದ ಸಚಿವರು ಮುಂದಿನ ದಿನಗಳಲ್ಲಿ ಸಮರ್ಪಕ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಯೋಜನೆಗೆ ಒಪ್ಪಿಗೆ: ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಕರ್ನಾಟಕಕ್ಕೆ 34 ಸಾವಿರ ಕೋಟಿ ರೂ. ಯೋಜನೆಗೆ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದರು. ಅಲ್ಲದೆ, ಶಿವಮೊಗ್ಗ ಜಿಲ್ಲೆಯ ಸಾಗರ-ಸಿಗಂಧೂರು, ಹಾಸನ-ತುಮಕೂರು ಹೆದ್ದಾರಿ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದ್ದು, ಕೇಂದ್ರ ಸಚಿವರು ಈ ಬಗ್ಗೆ ಮುಂದಿನ ದಿನಗಳಲ್ಲಿ ಆದ್ಯತೆ ನೀಡುವ ಆಶ್ವಾಸನೆ ನೀಡಿದ್ದಾರೆಂದು ಹೇಳಿದರು.







