ತನ್ನ ಉದ್ಯೋಗಿಗೆ ಗ್ರಾಹಕಿ ಜನಾಂಗ ನಿಂದನೆ ಮಾಡಿದಾಗ ಪ್ರತಿಭಟಿಸದ ಏರ್ ಟೆಲ್ ವಿರುದ್ಧ ವ್ಯಾಪಕ ಆಕ್ರೋಶ
ಓಲಾ ನೋಡಿ ಕಲಿತುಕೊಳ್ಳಿ ಎಂದ ಜನರು

ಬೆಂಗಳೂರು, ಜೂ.18: ಗ್ರಾಹಕಿಯೊಬ್ಬರು ತನ್ನ ಸಂಸ್ಥೆಯ ಉದ್ಯೋಗಿಯನ್ನು ಆತನ ಧರ್ಮದ ಆಧಾರದಲ್ಲಿ ಅವಹೇಳನ ಮಾಡಿದಾಗ ಅದನ್ನು ಪ್ರತಿಭಟಿಸದೆ ಆಕೆಗೆ ಸೇವೆ ಸಲ್ಲಿಸಲು ಬೇರೆ ಉದ್ಯೋಗಿಯನ್ನು ನೇಮಿಸಿದ ಏರ್ ಟೆಲ್ ಮೊಬೈಲ್ ಕಂಪೆನಿಯ ಧೋರಣೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪೂಜಾ ಸಿಂಗ್ ಎಂಬ ಮಹಿಳೆ ಸೋಮವಾರ ಏರ್ ಟೆಲ್ ಗೆ ದೂರೊಂದನ್ನು ಟ್ವೀಟ್ ಮಾಡಿದ್ದರು. 'ಡಿಟಿಎಚ್ ಸೇವೆ ಸರಿಯಿಲ್ಲ. ಹಾಗಾಗಿ ಅದನ್ನು ಪುನಃ ಇನ್ಸ್ಟಾಲ್ ಮಾಡಬೇಕು ಎಂಬ ತನ್ನ ಬೇಡಿಕೆಗೆ ಏರ್ ಟೆಲ್ ಸರಿಯಾಗಿ ಸ್ಪಂದಿಸಿಲ್ಲ. ಸಂಸ್ಥೆ ನಿಯೋಜಿಸಿದ ಉದ್ಯೋಗಿ ನನ್ನೊಂದಿಗೆ ಕೆಟ್ಟದಾಗಿ ಮಾತನಾಡಿ ಇನ್ನೊಮ್ಮೆ ಫೋನ್ ಮಾಡಬೇಡ ಎಂದು ಲೈನ್ ಕಟ್ ಮಾಡಿದ' ಎಂದು ಆರೋಪಿಸಿದ್ದಳು.
ಇದಕ್ಕೆ ಸ್ಪಂದಿಸಿದ ಏರ್ ಟೆಲ್ ಶುಹೈಬ್ ಎಂಬ ಇನ್ನೊಬ್ಬ ಉದ್ಯೋಗಿಯನ್ನು ಪೂಜಾ ಅವರ ಸಮಸ್ಯೆ ನಿವಾರಿಸಲು ನಿಯೋಜಿಸುತ್ತದೆ. ಆದರೆ ಈ ವಿಷಯ ತಿಳಿಯುತ್ತಲೇ ಪೂಜಾ ಪ್ರತಿಕ್ರಿಯಿಸಿದ ರೀತಿ ಮಾತ್ರ ಎಲ್ಲರಿಗೂ ಆಘಾತ ತರುವಂತಹದ್ದು. ಶುಹೈಬ್ ಬಗ್ಗೆ ನೇರವಾಗಿ ಟ್ವೀಟ್ ಮಾಡಿದ ಪೂಜಾ 'ಡಿಯರ್ ಶುಹೈಬ್, ನೀನು ಮುಸ್ಲಿಂ. ನನಗೆ ನಿನ್ನ ಕೆಲಸದ ನೀತಿಯ ಬಗ್ಗೆ ವಿಶ್ವಾಸವಿಲ್ಲ. ಕುರ್ ಆನ್ ಗ್ರಾಹಕ ಸೇವೆಗೆ ಏನಾದರೂ ಹೊಸ ಅರ್ಥವನ್ನೇ ಕಲ್ಪಿಸರಬಹುದು. ಹಾಗಾಗಿ ನನ್ನ ಸಮಸ್ಯೆ ನಿವಾರಿಸಲು ಒಂದು ಹಿಂದೂ ಸಹೋದ್ಯೋಗಿಯನ್ನು ನಿಯೋಜಿಸಿದರೆ ಒಳ್ಳೆಯದು' ಎಂದು ಹೇಳಿದ್ದಾರೆ.
ಈ ಟ್ವೀಟ್ ನೋಡಿ ಜನರು ಪೂಜಾ ವಿರುದ್ಧ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪೂಜಾ ಅವರ ನಿಲುವನ್ನು ಟೀಕಿಸಿ , ವ್ಯಂಗ್ಯವಾಡಿದ್ದಾರೆ. ಆದರೆ ಏರ್ ಟೆಲ್ ಕಂಪೆನಿ ಮಾತ್ರ ತನ್ನ ಉದ್ಯೋಗಿಗೆ ಗ್ರಾಹಕಿಯೊಬ್ಬರು ಮಾಡಿರುವ ಧರ್ಮ ನಿಂದನೆ ಹಾಗು ಅವಮಾನವನ್ನು ಪರಿಗಣನೆಗೇ ತೆಗೆದುಕೊಳ್ಳದೆ ಆಕೆ ಹೇಳಿದಂತೆ ಆಕೆಗೆ ಸೇವೆ ನೀಡಲು ಒಬ್ಬ ಹಿಂದೂ ಉದ್ಯೋಗಿಯನ್ನು ನಿಯೋಜಿಸಿ ಟ್ವೀಟ್ ಮಾಡಿದೆ!
ಡಿಟಿಎಚ್ ಸಮಸ್ಯೆ ನಿವಾರಣೆಗೂ ಉದ್ಯೋಗಿಯ ಧರ್ಮಕ್ಕೂ ಯಾವ ಸಂಬಂಧವಿದೆ? ಎಲ್ಲ ಗ್ರಾಹಕರಿಗೆ ಅವರ ಧರ್ಮ ನೋಡಿ ಸೇವೆ ಸಲ್ಲಿಸಲಾಗುತ್ತದೆಯೇ? ಈ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಅವಹೇಳನಕ್ಕೆ ಒಳಗಾದ ಉದ್ಯೋಗಿಯನ್ನು ನಿರ್ಲಕ್ಷಿಸಿ ಏರ್ ಟೆಲ್ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಪರೋಕ್ಷವಾಗಿ ಜನಾಂಗ ನಿಂದನೆಯನ್ನು ಸಮರ್ಥಿಸಿಕೊಂಡಿದೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಏರ್ ಟೆಲ್ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಆ ಟ್ವೀಟ್ ಅನ್ನು ಡಿಲೀಟ್ ಮಾಡುವ ಗೋಜಿಗೂ ಹೋಗಿಲ್ಲ.
ಈ ಹಿಂದೆ ವ್ಯಕ್ತಿಯೊಬ್ಬ ಓಲಾ ಡ್ರೈವರ್ ಮುಸ್ಲಿಂ ಎಂಬ ಕಾರಣಕ್ಕೆ ಬುಕ್ಕಿಂಗ್ ರದ್ದು ಪಡಿಸಿದೆ ಎಂದಾಗ ಅದನ್ನು ನಾವು ಒಪ್ಪುವುದಿಲ್ಲ ಎಂದು ಓಲಾ ಹೇಳಿದ್ದನ್ನು ಟ್ವಿಟರಿಗರು ಏರ್ ಟೆಲ್ ಗೆ ನೆನಪಿಸಿ ಅದರಿಂದ ಪಾಠ ಕಲಿತುಕೊಳ್ಳಿ ಎಂದಿದ್ದಾರೆ.







