ಬೆಳ್ತಂಗಡಿ: ಬಸ್ ಢಿಕ್ಕಿ; ಬಾಲಕ ಸ್ಥಳದಲ್ಲೇ ಮೃತ್ಯು
ಬಸ್ ಚಾಲಕ, ನಿರ್ವಾಹಕನ ಅಜಾಗರೂಕತೆಯ ಆರೋಪ

ಬೆಳ್ತಂಗಡಿ, ಜೂ. 18: ಬಸ್ ಚಾಲಕ ಹಾಗು ನಿರ್ವಾಹಕನ ಅಜಾಗರೂಕತೆಯಿಂದ ಶಾಲಾ ಬಾಲಕನೋರ್ವ ಬಸ್ಸಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಕರಂಬಾರು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತ ಬಾಲಕನನ್ನು ಕರಂಬಾರು ದರ್ಬೆಪಲ್ಕೆ ಮನೆಯ ಉಮೇಶ್ ಸಫಲ್ಯ ಎಂಬವರ ಪುತ್ರ ಕರಂಬಾರು ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಚಿಂತನ್ (8) ಎಂದು ಗುರುತಿಸಲಾಗಿದೆ.
ಈತ ತನ್ನ ತಾಯಿ ಹಾಗೂ ಅಣ್ಣನೊಂದಿಗೆ ಪುತ್ತೂರಿಗೆ ಮದುವೆಯೊಂದಕ್ಕೆ ತೆರಳಿದ್ದು, ಮದುವೆ ಮುಗಿಸಿ ಅವರು ಪುತ್ತೂರಿನಿಂದ ಬೆಳ್ತಂಗಡಿ ಬಂದು ಅಲ್ಲಿಂದ ಗೋಪಾಲಕೃಷ್ಣ ಎಂಬ ಖಾಸಗಿ ಬಸ್ಸಿನಲ್ಲಿ ಸವಣಾಲು ಮೂಲಕ ಕರಂಬಾರಿಗೆ ಹೋಗುತ್ತಿದ್ದರು. ಕರಂಬಾರು ದರ್ಬೆಪಲ್ಕೆ ಭಜನಾ ಮಂದಿರದ ಬಳಿ ಇಳಿಯುತ್ತಿದ್ದ ವೇಳೆ ತಾಯಿ ಹಾಗೂ ಹಿರಿಯ ಮಗು ಬಸ್ಸಿನಿಂದ ಇಳಿದಿದ್ದು ಚಿಂತನ್ ಇಳಿಯುತ್ತಿದ್ದ ವೇಳೆ ಚಾಲಕ ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದು, ಬಸ್ಸಿನಿಂದ ಕೆಳಗೆ ಬಿದ್ದ ಬಾಲಕ ಬಸ್ಸಿನ ಚಕ್ರಕ್ಕೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ. ಚಾಲಕನ ಹಾಗೂ ನಿರ್ವಾಹಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಘಟನೆಯ ಬಳಿಕ ಚಾಲಕ ಬಸ್ ಅನ್ನು ಲಾಯಿಲ ಸಮೀಪ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.





