ಅಮೆರಿಕದಲ್ಲಿ ತೆಲುಗು ಚಿತ್ರನಟಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ: ಭಾರತ ಮೂಲದ ದಂಪತಿ ಬಂಧನ

ವಾಶಿಂಗ್ಟನ್, ಜೂ. 18: ಅಮೆರಿಕದಲ್ಲಿ ತೆಲುಗು ಚಿತ್ರನಟಿಯರನ್ನು ಬಳಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಭಾರತ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
34 ವರ್ಷದ ಭಾರತ ಮೂಲದ ವ್ಯಾಪಾರಿ ಕಿಶನ್ ಮೊಡುಗುಮುಡಿ ವೇಶ್ಯಾವಾಟಿಕೆ ಜಾಲದ ರೂವಾರಿ ಎಂದು ‘ಶಿಕಾಗೊ ಟ್ರಿಬ್ಯೂನ್’ ವರದಿ ಮಾಡಿದೆ.
ತೆಲುಗು ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದ ಅವನು, ಹಲವಾರು ಯಶಸ್ವಿ ಚಿತ್ರಗಳ ಸಹನಿರ್ಮಾಪಕನಾಗಿದ್ದನು ಎಂದು ಪತ್ರಿಕೆ ಹೇಳಿದೆ.
ತೆಲುಗಿನ ಕನಿಷ್ಠ ಐವರು ನಟಿಯರನ್ನು ಆತ ತನ್ನ ಜಾಲಕ್ಕೆ ಆಕರ್ಷಿಸಿದ್ದ ಹಾಗೂ ಅವರನ್ನು ದೇಶಾದ್ಯಂತ ನಡೆಯುವ ಭಾರತೀಯ ಸಮ್ಮೇಳನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ಪ್ರದರ್ಶಿಸುತ್ತಿದ್ದ ಎನ್ನಲಾಗಿದೆ.
ಮೊಡುಗುಮುಡಿ ಮತ್ತು ಅವನ ಪತ್ನಿ ಚಂದ್ರಾ (31), ಪ್ರತಿಯೊಂದು ಹುಡುಗಿಯ ವಿವರಗಳನ್ನು ಒಳಗೊಂಡ ಕಡತಗಳನ್ನು ಇಟ್ಟುಕೊಂಡಿದ್ದರು ಎಂದು ಆರೋಪಿಸಲಾಗಿದೆ.
ತಾತ್ಕಾಲಿಕ ವೀಸಾಗಳಡಿ ಅಮೆರಿಕಕ್ಕೆ ಬರುವ ಈ ನಟಿಯರನ್ನು ಶಿಕಾಗೊದ ಬೆಲ್ಮಂಟ್ ಕ್ರಾಗಿನ್ ಎಂಬ ಪಟ್ಟಣದಲ್ಲಿರುವ ಎರಡು ಮಹಡಿಗಳ ಅಪಾರ್ಟ್‌ಮೆಂಟ್‌ನಲ್ಲಿ ಇರಿಸಲಾಗುತ್ತಿತ್ತು. ಅವರು ತಮ್ಮ ಗಿರಾಕಿಗಳನ್ನು ಡಲ್ಲಾಸ್, ನ್ಯೂಜರ್ಸಿ ಮತ್ತು ವಾಶಿಂಗ್ಟನ್ ನಗರಗಳಲ್ಲಿನ ಹೊಟೇಲ್‌ಗಳಲ್ಲಿ ಭೇಟಿಯಾಗುತ್ತಿದ್ದರು.





