ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇನ್ನೂ ಟೇಕಾಫ್ ಆಗಿಲ್ಲ: ಶಾಸಕ ಸುರೇಶ್ ಟೀಕೆ

ಚಿಕ್ಕಮಗಳೂರು, ಜೂ.18: ವೀರಶೈವರೊಳಗೆ ಭಿನ್ನತೆ ಹುಟ್ಟುಹಾಕಿದ್ದೇ ರಾಜಕಾರಣಿಗಳು. ಐಕ್ಯತೆಯನ್ನು ಸಾಧಿಸುವುದೇ ತಮ್ಮ ಆದ್ಯತೆ ಎಂದು ತರೀಕೆರೆ ಶಾಸಕ ಡಿ.ಎಸ್.ಸುರೇಶ್ ನುಡಿದರು.
ತರೀಕೆರೆಯ ಬೇಡ ಜಂಗಮ ಸಮಾಜ ಸಂಘ ಸೋಮವಾರ ಸಂಜೆ ಹುಣಸಘಟ್ಟದ ಶ್ರೀಗುರು ಹಾಲುಸ್ವಾಮಿ ಮಠದ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಂಗಮರು ಗಣನೀಯ ಪ್ರಮಾಣದಲ್ಲಿದ್ದು ಈ ಬಾರಿಯ ಚುನಾವಣೆಯಲ್ಲಿ ಒಟ್ಟಾಗಿ ಒಳ್ಳೆಯ ಆಶೀರ್ವಾದ ಮಾಡಿದ್ದಾರೆ. ವೀರಶೈವರಲ್ಲಿ ಎಸ್. ಎನ್. ಬಿ. ಪಿ. ಎಂಬ ಉಪಪಂಗಡಗಳ ಭಿನ್ನತೆಯನ್ನು ರಾಜಕೀಯ ಕಾರಣಗಳಿಗಾಗಿ ಸೃಷ್ಟಿಸಲಾಗಿದೆ. ವೀರಶೈವರಷ್ಟೇ ಅಲ್ಲ, ಎಲ್ಲ ಸಮಾಜಬಾಂಧವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿ ಯಡೆಯೂರಪ್ಪನವರಿಗಿದ್ದು, ಅದನ್ನೆ ತಾವು ಅನುಸರಿಸುತ್ತಿರುವುದಾಗಿ ನುಡಿದ ಸುರೇಶ್, ಐಕ್ಯತೆಯಲ್ಲಿ ಬಲವಿದೆ ಎಂದರು.
ಚುನಾವಣಾ ಸಂದರ್ಭದಲ್ಲಿ ಪಕ್ಷ ರಾಜಕಾರಣ. ಚುನಾವಣೆ ಮುಗಿದು ಶಾಸಕರಾದ ನಂತರ ಕ್ಷೇತ್ರದ ಎಲ್ಲ ಜನರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ ಸುರೇಶ್, ಒಂದೊಮ್ಮೆ ಮತನೀಡದವರೂ ತಮ್ಮ ನ್ಯಾಯಪರವಾದ ಕೆಲಸಕಾರ್ಯಗಳಿಗೆ ಯಾವುದೇ ಹಿಂಜರಿಯದೆ ತಮ್ಮಿಂದ ಮಾಡಿಸಿಕೊಳ್ಳಬಹುದು. ಸ್ವಾಭಿಮಾನಿಯಾದ ಜಂಗಮಸಮಾಜ ಬಾಂಧವರು ಎಂದಿನಂತೆ ಸಹಕಾರ ನೀಡಬೇಕು. ಸಂಘದ ಅಭಿವೃದ್ಧಿಕಾರ್ಯಕ್ಕಾಗಿ ನಿವೇಶನ ಕೊಡಿಸಲು ಬದ್ಧರಿರುವುದಾಗಿ ನುಡಿದರು.
ಚುನಾವಣೆ ಮುಗಿದು ಅಪವಿತ್ರಮೈತ್ರಿಯ ಸರಕಾರ ರಚನೆಯಾದರೂ ಇನ್ನು ಟೇಕಾಫ್ ಆಗಿಲ್ಲ. ಖಾತೆಗಳನ್ನು ಹಂಚಿಕೆಯಾಗಿಲ್ಲ. ಜಿಲ್ಲಾ ಉಸ್ತುವಾರಿಗಳ ನೇಮಕವಾಗಿಲ್ಲ. ಅತಿವೃಷ್ಟಿಯಿಂದ ಪ್ರವಾಹ ಬರುತ್ತಿದೆ. ರೈತರ ಗೋಳು ಕೇಳುವವರಿಲ್ಲದಂತಾಗಿದೆ. ಚುನಾವಣೆಯಲ್ಲಿ ಅಪ್ಪನ ಆಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಪರಸ್ಪರ ಕಿತ್ತಾಡಿಕೊಂಡವರು ಒಂದೇ ಗಂಟೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. 6-7ತಿಂಗಳಲ್ಲಿ ಈ ಸರಕಾರ ಪತನಗೊಂಡು ಜನರು ಹಾಗೂ ನಾಡಿನ ಸ್ವಾಮೀಜಿಗಳ ಆಶೀರ್ವಾದ ಪಡೆದಿರುವ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗುತ್ತಾರೆಂದು ಸುರೇಶ್ ಭವಿಷ್ಯ ನುಡಿದರು.
ಡಿಐಸಿ ನಿವೃತ್ತಜಂಟಿ ನಿರ್ದೇಶಕ ಬಿ.ಪಿ.ಶಿವಮೂರ್ತಿ ಅಭಿನಂದನಾ ಭಾಷಣದಲ್ಲಿ ಸುರೇಶ್ ಅವರ ಸರಳ-ಸಜ್ಜನಿಕೆ, ಜನಪರಕಾಳಜಿ ಗೆಲುವಿಗೆ ಶ್ರೀರಕ್ಷೆಯಾಯಿತು ಎಂದರು.
ಬೇಡಜಂಗಮ ಸಮಾಜ ಸಂಘದ ಗೌರವಾಧ್ಯಕ್ಷ ಎಚ್.ಸಿ.ಮಹೇಶ್ವರಮೂರ್ತಿ ಪ್ರಾಸ್ತಾವಿಸಿದ್ದು, ಕಾರ್ಯದರ್ಶಿ ಜಿ.ಉಮಾಪತಿ ಆರಾಧ್ಯ ಸ್ವಾಗತಿಸಿ, ಜಿ.ಟಿ.ಮರುಳಸಿದ್ದಸ್ವಾಮಿ ವಂದಿಸಿದರು.
ಲಿಂಗದಹಳ್ಳಿಯ ಎಲ್.ಜಿ.ರೇಣುಕಾರಾಧ್ಯ, ಹುಣಸಘಟ್ಟದ ಪಾರಂಪರಿಕವೈದ್ಯ ಡಾ.ಎಚ್.ಎಂ.ಸದಾಶಿವಯ್ಯ, ಪ್ರಕಾಶಯ್ಯ, ಎಚ್.ಪಿ.ರುದ್ರಯ್ಯ, ಎಚ್.ಎಂ.ವಿಶ್ವನಾಥಾರಾಧ್ಯ, ಬುಕ್ಕಾಂಬುದಿಯ ಗುರುಪಾದಯ್ಯ, ಬಗ್ಗವಳ್ಳಿ ಮರುಳಸಿದ್ದಯ್ಯ, ನಾರಣಾಪುರದ ಎನ್.ಸಿ.ಮರುಳಸಿದ್ದಯ್ಯ, ತರೀಕೆರೆಯ ಶಾಮಿಯಾನ ಸತೀಶ್, ಗೌರಾಪುರದ ಜಿ.ಸಿ.ಕಾಶೀನಾಥ್ , ಗೊಂಡೇದಹಳ್ಳಿಯ ಮರುಳಸಿದ್ದಯ್ಯ ಜೊತೆಗೆ ಪತ್ರಕರ್ತರಾದ ಪ್ರಭುಲಿಂಗಶಾಸ್ತ್ರಿ, ಅನಂತನಾಡಿಗ್, ಅಪ್ಪಾಜಿ, ಸುರೇಶ್ ಸೇರಿದಂತೆ ಮುಖ್ಯಅತಿಥಿಗಳನ್ನು ಸನ್ಮಾನಿಸಲಾಯಿತು.







