ಚಿಕ್ಕಮಗಳೂರು: ಛಾಯಾಚಿತ್ರ ಗ್ರಾಹಕ, ಕಲಾವಿದ ಜಿ.ದಯಾನಂದ ಇನ್ನಿಲ್ಲ

ಚಿಕ್ಕಮಗಳೂರು, ಜೂ.18: ಜಿಲ್ಲೆಯ ಪತ್ರಿಕೋದ್ಯಮ ಕ್ಷೇತ್ರ ಹಿರಿಯ ಛಾಯಾಗ್ರಾಹಕ, ವ್ಯಂಗ್ಯ ಚಿತ್ರಕಾರ ಜಿ.ದಯಾನಂದ (58) ಅವರು ಸೋಮವಾರ ಬೆಳಗ್ಗೆ 10:45ಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲ ದಿನಗಳ ಹಿಂದೆ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದ ಜಿ. ದಯಾನಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗ್ಗೆ ತೀವ್ರ ಅಸ್ವಸ್ತರಾಗಿದ್ದ ಅವರು ಕೊನೆಯುಸಿರೆಳೆದರು. ದಯಾನಂದ್ ಅವರ ತಾಯಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ದಯಾನಂದ್ ಹುಟ್ಟಿ ಬೆಳೆದದ್ದು ಚಿಕ್ಕಮಗಳೂರಿನಲ್ಲಿ. ತಾಯಿ ಲಕ್ಷ್ಮೀದೇವಿ, ಪತ್ನಿ ಯಶೋಧಾ, ಪುತ್ರಿ ಹರ್ಷಿತಾ, ಸಹೋದರರಾದ ಪ್ರಶಾಂತ, ಪ್ರದೀಪ ಹಾಗೂ ಸಹೋದರಿಯರಾದ ಆಶಾಲತಾ, ಭಾರತಿ ಅವರನ್ನು ಅಗಲಿದ್ದಾರೆ. ದಯಾನಂದ್ ಅವರ ತಂದೆ ಗೋಪಾಲಕೃಷ್ಣ ಜಿಲ್ಲಾಸ್ಪತ್ರೆಯಲ್ಲಿ ಹೆಡ್‍ಸ್ಟಾಪ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಇತ್ತೀಚೆಗೆ ನಿಧನರಾಗಿದ್ದಾರೆ.
ಬಾಲ್ಯದಿಂದಲೂ ಮಾತನಾಡಲು ಬಾರದ ಜಿ.ದಯಾನಂದ ಚಿತ್ರ ಬಿಡಿಸುವ ಆಸಕ್ತಿ ಹೊಂದಿದ್ದರು. ಇದರ ಜೊತೆ ಜೊತೆಗೆ ವ್ಯಂಗ್ಯಚಿತ್ರ ಬಿಡಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ತಾವು ರಚಿಸಿದ ಏಡ್ಸ್ ರೋಗ ಪ್ರಚಲಿತವಾದ ಸಂದರ್ಭದಲ್ಲಿ ಅವರು ಬರೆದ 'ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ' ಎಂಬ ವ್ಯಂಗ್ಯ ಚಿತ್ರಕ್ಕೆ ಏಡ್ಸ್ ಸೊಸೈಟಿಯಿಂದ ಬಹುಮಾನ ದೊರೆತಿತ್ತು. ಕಥೆ, ಪುಸ್ತಕಗಳಿಗೆ ಸಾಂದರ್ಭಿಕ ಚಿತ್ರಗಳನ್ನು ಹಾಗೂ ಮುಖಪುಟದ ಚಿತ್ರಗಳನ್ನು ಅತ್ಯಂತ ಅರ್ಥಗರ್ಭಿತವಾಗಿ ರಚಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಚಿತ್ರಕಲೆ, ವ್ಯಂಗ್ಯಚಿತ್ರ ಅಭಿರುಚಿಯೊಂದಿಗೆ ಕ್ಯಾಮಾರ ಹಿಡಿದು ಉತ್ತಮ ಚಿತ್ರಗಳನ್ನು ಸೆರೆ ಹಿಡಿಯುವ ಅಭ್ಯಾಸವನ್ನು ರೂಢಿಸಿಕೊಂಡ ಜಿ.ದಯಾನಂದರವರು, ಕ್ರಮೇಣ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸಿ ಪತ್ರಿಕೆಗಳಿಗೂ ಛಾಯಾಚಿತ್ರಗಳನ್ನು ಒದಗಿಸುತ್ತಿದ್ದರು. ಸದಾಕ್ರಿಯಾಶೀಲ ಫೊಟೊ ಜರ್ನಲಿಸ್ಟ್ ಆಗಿದ್ದ ದಯಾನಂದ್ ಅವರು ಪತ್ರಕರ್ತರ ವಲಯದಲ್ಲಿ ಮಾತ್ರವಲ್ಲದೇ ಇಡೀ ಜಿಲ್ಲೆಯಾದ್ಯಂತ ಹೆಸರು ಗಳಿಸಿ ಚಿರಪರಿಚಿತರಾಗಿದ್ದರು.
ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನಗರದ ಕೆಎಸ್ಸಾರ್ಟಿಸಿ ಡಿಪೋ ಪಕ್ಕದ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಸಂತಾಪ: ದಯಾನಂದ್ ಅವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ನಗರಸಭಾ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಸಂತಾಪ ಸೂಚಿಸಿದ್ದಾರೆ.







