ಅಂಕೋಲಾ ಗ್ರಾಮದ ರಸ್ತೆ ದುರಸ್ಥಿ ಬಗ್ಗೆ ಮಾಹಿತಿ ನೀಡಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಜೂ.19: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮದಲ್ಲಿ ಹದಗೆಟ್ಟಿರುವ ಸಾರ್ವಜನಿಕ ರಸ್ತೆ ದುರಸ್ಥಿಗೆ ಸಂಬಂಧಿಸಿದ ಮಾಹಿತಿಯನ್ನು ಬುಧವಾರ ಹೈಕೋರ್ಟ್‌ಗೆ ನೀಡಬೇಕೆಂದು ಸರಕಾರಿ ವಕೀಲರಿಗೆ ನಿರ್ದೇಶಿಸಿದೆ.
ಅಂಕೋಲಾ ತಾಲೂಕಿನ ಗುಲ್ಲಾಪುರ-ಕಿಮ್ಮಾಣಿ ನಡುವಿನ 24 ಕಿ.ಮೀ ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ದುರಸ್ಥಿಗೆ ಹಲವು ಬಾರಿ ಸರಕಾರವನ್ನು ಕೋರಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ರಸ್ತೆ ದುರಸ್ಥಿ ಮಾಡಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಡೋಂಗ್ರಿ ಗ್ರಾಮದ ಪ್ರೇಮ್ ಕುಮಾರ್ ಹೆಗಡೆ ಹಾಗೂ ಇತರೆ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ವಿಚಾರಣೆ ವೇಳೆ ಸರಕಾರಿ ವಕೀಲರು ಉತ್ತರಿಸಿ, ರಸ್ತೆ ದುರಸ್ಥಿಗೆ ಸುಮಾರು 75 ಲಕ್ಷ ರೂ. ಖರ್ಚಾಗಲಿದೆ ಎಂದು ಅಂದಾಜಿಸಿ, ಆ ಹಣ ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಹಣ ಬಿಡುಗಡೆ ಮಾಡಬೇಕಿದೆ. ಈ ಕುರಿತು ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದು ಕೊರ್ಟ್‌ಗೆ ತಿಳಿಸಲಾಗವುದು ಎಂದು ವಿವರಿಸಿದರು.
ಸರಕಾರಕ್ಕೆ ಹಣ ಬಿಡುಗಡೆ ಮಾಡಲು ಎಷ್ಟು ಸಮಯಬೇಕೆಂದು ಪ್ರಶ್ನಿಸಿದ ನ್ಯಾಯಪೀಠವು ಬುಧವಾರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡಬೇಕೆಂದು ಸರಕಾರಿ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.







